ಉಡುಪಿ: ಮತ್ತೆ ದಾಖಲೆ ರೀತಿಯಲ್ಲಿ ಏರಿಕೆಯಾದ ಕೊರೋನಾ ಸೋಂಕು- ಮೂವರ ಮೃತ್ಯು
May 14, 2021
ಉಡುಪಿ ಮೇ 14 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೆಲ ದಿನಗಳ ಬಳಿಕ ಇಂದು ಮತ್ತೆ 1000 ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ . ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಒಂದೇ ಸಮನೆ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ ಇಂದು 1220 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಉಡುಪಿ- 472, ಕುಂದಾಪುರ- 540, ಕಾರ್ಕಳ – 205 ಹಾಗೂ ಹೊರ ಜಿಲ್ಲೆಯ 3 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಈ ಮೂಲಕ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 7619 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 3ಮಂದಿ ಸೋಂಕಿತರು ಮೃತಪಟ್ಟಿದ್ದು, ಉಡುಪಿಯ ಓರ್ವ ವ್ಯಕ್ತಿ ಹಾಗೂ ಓರ್ವ ಮಹಿಳೆ ಮತ್ತು ಕುಂದಾಪುರದ ಓರ್ವ ವ್ಯಕ್ತಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಮೇ. 13 ರಂದು 706 ಮಂದಿ ಸೋಂಕಿತರು ಆಸ್ಪತ್ರೆ ಯಿಂದ ಗುಣಮುಖರಾಗಿ ಹೊರ ಬಂದಿದ್ದು ಈ ವರೆಗೆ ಒಟ್ಟು 36,975 ಮಂದಿ ಗುಣಮುಖರಾಗಿದ್ದಾರೆ. ಮೇ. 13ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 5,42,487 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 44,848 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈ ವರೆಗೆ ಜಿಲ್ಲೆಯಲ್ಲಿ ಒಟ್ಟು254 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀಕರತೆ ಸೃಷ್ಟಿಸುತ್ತಿದೆ. ಒಂದೇ ದಿನ ಬರೋಬ್ಬರಿ 41,779 ಮಂದಿಗೆ ಕೊರೋನಾ ವಕ್ಕರಿಸಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 21,30,267ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 373 ಮಂದಿ ಕೊರೋನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 21,085ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 14,316 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 10,29,312ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 121 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು 35,879 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 15,10,557ಕ್ಕೆ ಏರಿಕೆಯಾಗಿದೆ. ಇನ್ನು 5,98,605 ಸಕ್ರೀಯ ಪ್ರಕರಣಗಳಿವೆ.