ಸಂಘರ್ಷದ ಪರಿಸ್ಥಿತಿಯಲ್ಲಿ ಚೀನಾದಿಂದ ಮೋದಿ ಹೊಗಳಿಕೆ ಏಕೆ?: ರಾಹುಲ್ ಗಾಂಧಿ
ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತ- ಚೀನಾ ಸಂಘರ್ಷದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ.
ಭಾರತದ ಪ್ರದೇಶವನ್ನು ಚೀನಾ ಸೇನ ಅತಿಕ್ರಮಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟಾರ್ಗೆಟ್ ಮಾಡಿರುವ ರಾಹುಲ್ ಗಾಂಧಿ, ಸಂಘರ್ಷದ ಪರಿಸ್ಥಿತಿಯಲ್ಲಿ ಚೀನಾ ಏಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ನ ಲೇಖನವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಚೀನಾ ನಮ್ಮ ಯೋಧರನ್ನು ಹತ್ಯೆ ಮಾಡಿದೆ. ಚೀನಾ ನಮ್ಮ ನೆಲವನ್ನು ಕಬಳಿಸಿದೆ. ಆದರೂ ಸಂಘರ್ಷದ ಪರಿಸ್ಥಿತಿಯಲ್ಲೇಕೆ ಚೀನಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದೆ ಎಂದು ಕೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಸರೆಂಡರ್ ಮೋದಿ ಎಂದು ಟೀಕಿಸಿದ್ದರು. ಚೀನಾದೆಡೆಗೆ ಭಾರತದ ಓಲೈಕೆಯ ನೀತಿ ಬಹಿರಂಗ ಎಂಬ ಶೀರ್ಷಿಕೆ ಹೊಂದಿದ್ದ ಅಂತಾರಾಷ್ಟ್ರೀಯ ದೈನಿಕದ ಲೇಖನವೊಂದನ್ನು ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತಾವವಾಗಿ ಸರೆಂಡರ್ ಮೋದಿ ಎಂದು ಟೀಕಿಸಿದ್ದರು.