ಹೊನ್ನಾವರ: ಹಿರಿಯ ಯಕ್ಷಗಾನ ಕಲಾವಿದ, ಹಾಸ್ಯಗಾರ ಕರ್ಕಿ ನಾರಾಯಣ ಇನ್ನಿಲ್ಲ

ಹೊನ್ನಾವರ: ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಹಾಸ್ಯಗಾರ (90), ಹೊನ್ನಾವರದ ಕರ್ಕಿಯ ತಮ್ಮ ನಿವಾಸದಲ್ಲಿ ಸೋಮವಾರ ನಿಧನರಾದರು.
ಆರು ದಶಕಗಳ ಕಾಲ ಯಕ್ಷಗಾನದಲ್ಲಿ ಕಲಾವಿದರಾಗಿದ್ದ ಅವರು, ಶೃಂಗಾರ ಮತ್ತು ಲಾಲಿತ್ಯದ ಪಾತ್ರಗಳ ಮನೋಜ್ಞ ನಟನೆಯಿಂದ ಪ್ರಸಿದ್ಧರಾಗಿದ್ದರು. ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಯಕ್ಷಗಾನ ಪ್ರಿಯರ ಅಚ್ಚುಮೆಚ್ಚಿನ ಪಾತ್ರರಾಗಿದ್ದರು. ಬಬ್ರುವಾಹನ, ಅಭಿಮನ್ಯು, ಅರ್ಜುನ, ಸುಧನ್ವ, ಕೀಚಕ, ಶಿವ, ರಾಮ, ಲಕ್ಷ್ಮಣ, ವಾಲಿ ಮುಂತಾದ ಪಾತ್ರ ಜನರ ಮೆಚ್ಚುಗೆ ಗಳಿಸಿತ್ತು.

ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣವನ್ನು ಪಡೆದುಕೊಂಡಿದ್ದ ನಾರಾಯಣ ಹಾಸ್ಯಗಾರರು ಒಂದು ವರ್ಷಗಳ ಕಾಲ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಬಳಿಕ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಶಿವರಾಮ ಕಾರಂತರಲ್ಲಿ ಎರಡು ವರ್ಷ ಹಾಗೂ ಕುಷ್ಟ ಗಾಣಿಗರ ಬಳಿಯಲ್ಲಿ ಎರಡು ವರ್ಷ ಬಡಗುತಿಟ್ಟಿನ ಯಕ್ಷಗಾನ ಅಭ್ಯಾಸವನ್ನು ನಡೆಸಿದರು.

ಕರ್ಕಿ ಹಾಸ್ಯಗಾರ ಮೇಳದೊಂದಿಗೆ ವಿವಿಧ ಜಿಲ್ಲೆಗಳು, ಹೊರರಾಜ್ಯಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದರು. ಈ ಮೇಳವು 1974ರಲ್ಲಿ ಬಿ.ಬಿ.ಸಿ ವಾಹಿನಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಮೊದಲ ಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರ ಕಲಾಸೇವೆಯನ್ನು ಪರಿಗಣಿಸಿ ಜಾನಪದ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಯೂ ಪ್ರದಾನವಾಗಿದೆ. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ

Leave a Reply

Your email address will not be published. Required fields are marked *

error: Content is protected !!