ಹಡಿಲು ಭೂಮಿ ಆಂದೋಲನಕ್ಕೆ ಅಪಸ್ವರ-ಕಾಂಗ್ರೆಸ್ ನಾಯಕರ ರೈತ ವಿರೋಧಿ ಹೇಳಿಕೆ: ಮಹೇಶ್ ಠಾಕೂರ್ ತಿರುಗೇಟು

ಉಡುಪಿ: ಶಾಸಕ ಕೆ.ರಘುಪತಿ ಭಟ್ ರವರು ತಮ್ಮ ಕ್ಷೇತ್ರದಲ್ಲಿ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಈ ಬಗ್ಗೆ ಯೋಜನೆಗಳನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದು ಇಡೀ ರಾಜ್ಯದಲ್ಲಿಯೇ ಯಾವ ಶಾಸಕನೂ ಮಾಡದ ಅವರ ಈ ವಿನೂತನ ಹೆಜ್ಜೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ರವರು ಹೇಳಿಕೆ ನೀಡಿದ್ದಾರೆ.

ಅವರು ಗುರುವಾರ ನಗರ ಬಿಜೆಪಿ ಕಚೇರಿಯಲ್ಲಿ ಸ್ಥಳೀಯ ಕೆಲವು ಕಾಂಗ್ರೆಸ್ ನಾಯಕರುಗಳು ಶಾಸಕರ ಹಡಿಲು ಭೂಮಿ ಯೋಜನೆಯನ್ನು ಟೀಕಿಸಿ ಶಾಸಕರಿಗೆ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಎಂದು ಸಲಹೆ ನೀಡಿ  ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಹೇಳಿಕೆಗೆ ತಿರುಗೇಟು ನೀಡಿದರು. ಶಾಸಕರ ಹಡಿಲು ಭೂಮಿ ಯೋಜನೆಯಿಂದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಾಳು ಬಿದ್ದಿರುವ ಸುಮಾರು ಐದು ಸಾವಿರ ಎಕರೆ ಬಂಜರು ಭೂಮಿಗೆ ಜೀವ ತುಂಬಲಿದ್ದು ಮುಂದಿನ ಮೂರು ವರ್ಷದಲ್ಲಿ ಇಡೀ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಕೃಷಿ ಭೂಮಿಗಳು ಹಸಿರಿನಿಂದ ನಳನಳಿಸಲಿದ್ದು ಪ್ರತೀ ವರ್ಷ ಮೂರೂ ಬೆಳೆ ಬೆಳೆದು ಇಲ್ಲಿನ ರೈತರ ಬಾಳು ಹಸನಾಗಲಿದೆ ಮತ್ತು ದೇಶಕ್ಕೆ ಈ ಯೋಜನೆ ಮಾದರಿಯಾಗಲಿದೆ.

ಅಲ್ಲದೆ ದಶಕಗಳಿಂದ ಹೂಳು ತುಂಬಿದ ತೋಡುಗಳ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದ್ದು ಮಳೆಗಾಲದಲ್ಲಿ ನೆರೆಯ ಸಮಸ್ಯೆಗೆ ಪರಿಹಾರ ದೊರಕಲಿದೆ, ಅಂತರ್ಜಲ ಮಟ್ಟವು ಬೆಳವಣಿಗೆ ಕಂಡು ಕೊಳ್ಳಲಿದ್ದು ಉಡುಪಿಯಲ್ಲಿ ಈಗ ಎದುರಿಸುತ್ತಿರುವ ನೀರಿನ ಸಮಸ್ಯೆಯೂ ಕೂಡ  ಈ ಎಲ್ಲಾ ಕಾರಣಗಳಿಂದ  ಕ್ಷೇತ್ರದ ಕೃಷಿಕರು ಸಂಪೂರ್ಣ ಸಂತೃಪ್ತರಾಗಿದ್ದು ಮತ್ತೆ ಕೃಷಿ ಮಾಡಲು ಉತ್ಸಾಹದಿಂದ ಗದ್ದೆಗಳತ್ತ ತೆರಳುತ್ತಿದ್ದಾರೆ.ಈಗಾಗಲೇ ಒಂದು ಸಾವಿರ ಎಕರೆಗಳಷ್ಟು  ಬಂಜರು ಗದ್ದೆಗಳನ್ನು ಸ್ವಚ್ಛ ಮಾಡಿ ಯಂತ್ರಗಳಿಂದ ಉಳುವ ಕಾರ್ಯವೂ ಭರದಿಂದ ಸಾಗುತ್ತಿದೆ.

ಮಳೆಗಾಲ ಬರುವ ಮೊದಲು ಈ ಎಲ್ಲ ತಯಾರಿ ಆಗ ಬೇಕಾಗುವುದರಿಂದ ಎಲ್ಲವು ಯೋಜನಾಬದ್ಧವಾಗಿ ಸಮಯೋಚಿತವಾಗಿ ನಡೆಯುತ್ತಿದೆ. ಈ ಯೋಜನೆಯಲ್ಲಿ ಶಾಸಕರು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಕೂಡ ತೊಡಗಿಸಿ ಕೊಂಡಿದ್ದು ಗ್ರಾಮಾಂತರ ಭಾಗದಲ್ಲಿ ಜನರು ಪಕ್ಷಾತೀತವಾಗಿ ಶಾಸಕರ ಜೊತೆ ಕೈ ಜೋಡಿಸಿದ್ದಾರೆ. ಆದರೆ ನಗರ ಭಾಗದ ಕಾಂಗ್ರೆಸ್ ಜನಪ್ರತಿನಿದಿಗಳು ತಮ್ಮ ವ್ಯಾಪ್ತಿಯ ಭಾಗದಲ್ಲಿನ ಹಡಿಲು ಭೂಮಿಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದೇ  ರಾಜಕೀಯ ಪ್ರೇರಿತರಾಗಿ ರೈತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.ಕೋವಿಡ್ 19 ವಿರುದ್ಧ ಶಾಸಕರ ಹೋರಾಟ ನಿರಂತರ ಶಾಸಕ ಕೆ. ರಘುಪತಿ ಭಟ್ ರವರ ಕೋವಿಡ್ 19 ಹೋರಾಟ ನಿರಂತರವಾಗಿದ್ದು ಅದರ ಪ್ರಥಮ ಅಲೆಯನ್ನು ಉಡುಪಿಯಲ್ಲಿ ಎದುರಿಸಲು ಅವರು ರೂಪಿಸಿದ ಪೂರ್ವ ಯೋಜನೆಗಳು ಐತಿಹಾಸಿಕ.

ಇಂದಿಗೂ ಕೂಡ ಅದರ ಎರಡನೆಯ ಅಲೆಯು ತೀವ್ರವಾಗಿ ಹರಡಿರುವ ಸಂದರ್ಭದಲ್ಲಿ ಶಾಸಕರು ನಿರಂತರವಾಗಿ ಅಧಿಕಾರಿಗಳ ಜೊತೆ ಸಭೆಗಳನ್ನು ನಡೆಸಿ ಪ್ರತೀ ದಿನವೂ ಪ್ರಸ್ತುತ ಪರಿಸ್ಥಿತಿಯ ಅವಲೋಕನ ನಡೆಸಿ ಮುಂದಿನ ಯೋಜನೆಗಳನ್ನು ಸಿದ್ದ ಪಡಿಸುತಿದ್ದಾರೆ. ಆಮ್ಲಜನಕ ಹಾಗು ವೆಂಟಿಲೇಟರ್ ವ್ಯವಸ್ಥೆಗಳನ್ನು ಹತೋಟಿಗೆ ತರಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ಮಾಡುತಿದ್ದಾರೆ. ಅವರ ನೇತೃತ್ವದಲ್ಲಿ ಸೋಂಕಿತರ ರಕ್ಷಣೆಯ ಕಾರ್ಯಪಡೆಯೇ ಸಿದ್ದವಾಗಿದ್ದು ಅದು ನಿರಂತರವಾಗಿ ಕೆಲಸ ಮಾಡುತ್ತಿದೆ. ಲಸಿಕೆ ಉಪಲಬ್ಧತೆಯ ಸಮಸ್ಯೆ ಇಡೀ ದೇಶಕ್ಕೆ ಸವಾಲಾಗಿದ್ದು ಅದರ ಶೀಘ್ರ ಪರಿಹಾರಕ್ಕಾಗಿ ಕೇಂದ್ರ ಸರಕಾರ ಮಟ್ಟದಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿವೆ.

ದೇಶಕ್ಕೆ ಲಸಿಕೆ ಪರಿಚಯಿಸಿದ ಆರಂಭದಲ್ಲಿ ಕಾಂಗ್ರಸ್ಸಿಗರೇ ಅದರ ವಿರುದ್ಧ ಅಪಪ್ರಚಾರ ಮಾಡಿ ಜನರನ್ನು ಲಸಿಕಾ ಕೇಂದ್ರಗಳಿಗೆ  ತೆರಳದಂತೆ ಪ್ರೇರೇಪಿಸಿ ಈಗ ಬಾಲಿಶ ಹೇಳಿಕೆಗಳನ್ನು ನೀಡಿ ಪುಕ್ಕಟೆ ಪ್ರಚಾರ ಪಡೆಯುವ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನಾದರೂ ಕಾಂಗೇಸ್ ನಾಯಕರುಗಳು ಇಂತಹ ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಮಾಡದೇ ಶಾಸಕರ ಜನಪರ ಕಾರ್ಯಕ್ರಮಗಳಿಗೆ ಪೂರಕವಾಗಿ  ಹಾಗು ಕರೋನ ವಿರುದ್ಧ ಅವರ ಹೋರಾಟದ ಜೊತೆ ಕೈ ಜೋಡಿಸಬೇಕೆಂದು ಮಹೇಶ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!