ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಅಸಮರ್ಪಕ ನಿರ್ವಹಣೆಯೇ ಕಾರಣ: ತಜ್ಞರ ಸಮಿತಿ ವರದಿ

ಬೆಂಗಳೂರು: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೇ 2 ರ ಮಧ್ಯರಾತ್ರಿ ಸಂಭವಿಸಿದ 24 ಜನರ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿ ಸಲ್ಲಿಸಿದೆ. 

ಮೇ 2ರಂದು ರಾತ್ರಿ 10.30  ಆಸ್ಪತ್ರೆಯಲ್ಲಿ ಆಮ್ಲಜನಕವೇ ಲಭ್ಯವಿರಲಿಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಅಭಿಪ್ರಾಯಪಟ್ಟಿದೆ. ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಶೇಷ ವಿಭಾಗದ ಪೀಠದ ಮುಂದೆ ಬುಧವಾರ ಸಲ್ಲಿಸಲಾದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ. ಮೇ 2 ರಂದು ಚಾಮರಾಜನಗರ ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ಆಮ್ಲಜನಕರ ಕೊರತೆ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ, ಆಸ್ಪತ್ರೆಯ ನೋಡಲ್ ಅಧಿಕಾರಿಯಾಗಲಿ ಮೈಸೂರಿ ನಿಂದ ಸರಬರಾಜು ಆಗುವ  ಸಮಸ್ಯೆ ಬಗ್ಗೆ ಮಾತನಾಡಿರಲಿಲ್ಲ ಎಂದು ಸಮಿತಿ ತಿಳಿಸಿದೆ.

ಆಸ್ಪತ್ರೆಯ ಆಡಳಿತ ಮಂಡಳಿ ಜಾಗರೂಕವಾಗಿದಿದ್ದರೇ ಸಮಯೋಚಿತವಾಗಿ ಆಮ್ಲಜನಕ ಸಿಲಿಂಡರ್ ಪೂರೈಸಿದ್ದರೇ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರಲಿಲ್ಲ ಎಂದು ತಿಳಿಸಿದೆ.

‘ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಸಾಕಷ್ಟು ಆಮ್ಲಜನಕ ಸಂಗ್ರಹಿಸಬಹುದಿತ್ತು. ಅದನ್ನು ಮಾಡದೆ ಇರುವುದು ಅಮೂಲ್ಯ ಜೀವಗಳ ಹಾನಿಗೆ ಕಾರಣವಾಗಿದೆ’ ಎಂದು ವರದಿ ಹೇಳಿದೆ.

‘ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ವಿಫಲವಾಗಿದ್ದಾರೆ. ಚಾಮರಾಜನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ’ ಎಂದು ವರದಿ ಹೇಳಿದೆ. ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆರೋಪ ಸಾಬೀತುಪಡಿಸುವ ಯಾವುದೇ ದಾಖಲೆಗಳಿಲ್ಲ. ಚಾಮರಾಜನಗರ ಜಿಲ್ಲೆ ಸೇರಿ ಯಾವುದೇ ಜಿಲ್ಲೆಗೆ ಆಮ್ಲಜನಕ ಪೂರೈಸಲು ರೋಹಿಣಿ ಸಿಂಧೂರಿ ತಡೆದಿದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದು ಸಮಿತಿ ತಿಳಿಸಿದೆ.

ಮೈಸೂರು ಜಿಲ್ಲಾ ಆಸ್ಪತ್ರೆಯಿಂದ ಮಧ್ಯರಾತ್ರಿಯ ವೇಳೆಗೆ ನಲವತ್ತು ಜಂಬೋ ಸಿಲಿಂಡರ್‌ಗಳು ಲಭ್ಯವಾಗಿದ್ದವು ಮತ್ತು ಅವುಗಳನ್ನು ತಕ್ಷಣವೇ ಸಾಗಿಸಿದ್ದರೆ, ಅವರು ಬೆಳಿಗ್ಗೆ 2 ಗಂಟೆಯ ಹೊತ್ತಿಗೆ ಚಾಮರಾಜನಗರಕ್ಕೆ ತಲುಪುತ್ತಿತ್ತು. ಆದರೆ ಬೆಳಿಗ್ಗೆ 6 ಗಂಟೆಗೆ ಸಿಲಿಂಡರ್‌ಗಳು ಚಾಮರಾಜನಗರಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.

ಜಿಲ್ಲಾ ಆಸ್ಪತ್ರೆಗಳಿಗೆ ಹಂಚಿಕೆ ಮತ್ತು ಆಮ್ಲಜನಕದ ವಿತರಣೆಯನ್ನು ಸಂಘಟಿಸಲು ಡಿಸಿ ಶ್ರೇಣಿಗಿಂತ ಹೆಚ್ಚಿನ ಅಧಿಕಾರಿಯನ್ನು ನೇಮಿಸಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕನಿಷ್ಠ ಬಫರ್ ಸ್ಟಾಕ್ 24 ಗಂಟೆಗಳ ಕಾಲ ಉಳಿಯುವಂತೆ ನೋಡಿಕೊಳ್ಳ ಬೇಕು. ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆ ಮಾಡಬೇಕು ನೈಜ ಸಮಯದಲ್ಲಿ ಆಮ್ಲಜನಕದ ಸಮತೋಲನವನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ರೀತಿಯಲ್ಲಿ ಪ್ರದರ್ಶಿಸಬೇಕು. ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸುವಾಗ ಜಿಪಿಎಸ್  ಅಳವಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

Leave a Reply

Your email address will not be published. Required fields are marked *

error: Content is protected !!