ಉಡುಪಿ: ಕರೋನಾ ಮುಂಜಾಗ್ರತಾ ಕ್ರಮದ ಮಾರ್ಗಸೂಚಿಗಳ ಬಗ್ಗೆ ಲೋಕಾಯುಕ್ತ ಪರಿಶೀಲನೆ
ಉಡುಪಿ ಜೂನ್ 22: ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗದ ಡಿ.ವೈ.ಎಸ್.ಪಿ. ಭಾಸ್ಕರ ವಿ.ಬಿ ಇವರ ನೇತೃತ್ವದ ತಂಡದವರು ಸೋಮವಾರ, ಉಡುಪಿ ನಗರ ವ್ಯಾಪ್ತಿಯಲ್ಲಿ ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ/ರಾಜ್ಯ ಸರಕಾರದ ಮಾರ್ಗಸೂಚಿಗಳ ನಿಯಮ ಪಾಲಿಸಲಾಗುತ್ತಿರುವ ಬಗ್ಗೆ ಉಡುಪಿ ನಗರ ಸಭೆ, ಉಡುಪಿ ತಾಲೂಕು ಕಛೇರಿ, ಉಪನೋಂದಣಿ ಅಧಿಕಾರಿ ಕಛೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಉಡುಪಿ. ಪ್ರಾದೇಶಿಕ ಸಾರಿಗೆ ಕಛೇರಿ ಉಡುಪಿ ಇತರೆ ಕಛೇರಿಗಳು ಹಾಗೂ ಹೊಟೇಲ್ ಮತ್ತು, ಮಳಿಗೆಗಳಿಗೆ ಕೂಡಾ ಭೇಟಿ ನೀಡಿ ಸಾಮಾಜಿಕ ಅಂತರ ಪರಿಸ್ಥಿತಿ,
ಮಾಸ್ಕ ದಾರಣೆ ನಿಯಮ ಪಾಲನೆ, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ, ಇತ್ಯಾದಿ ಹಾಗೂ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಗಳ ಪಾಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ
ಪರಿಶೀಲನೆ ನಡೆಸಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನಗಳನ್ನು ನೀಡಿದರು.
ಸರಕಾರಿ ಕಛೇರಿಗಳಲ್ಲಿ ಸಿಬ್ಬಂದಿಗಳು, ಕಛೇರಿಗೆ ಬರುವ ಸಾರ್ವಜನಿಕರ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಅವರ ಹೆಸರ ದೂರವಾಣಿ ಸಂಖ್ಯೆಯನ್ನು ನೊಂದಣಿ ಪುಸ್ತಕದಲ್ಲಿ ದಾಖಲಿಸಬೇಕು. ಸ್ಯಾನಿಟೈಸರ್ ಇರಿಸಬೇಕು. ಮೇಲುಸ್ತುವಾರಿಗೆ ಒಬ್ಬರು ಅಧಿಕಾರಿಯನ್ನು ನಿಯೋಜಿಸಬೇಕು ಎಂಬುದಾಗಿ ನಿಯಮದಲ್ಲಿದೆ ಆದರೆ ಸರಕಾರಿ ಕಛೇರಿಗಳಿಗೆ ಭೇಟಿ ನೀಡಿದ ಸಂದರ್ಭ ಕೆಲವೆಡೆ ಸ್ಯಾನಿಟೈಸರ್ ಮಾತ್ರ ಬಳಕೆಯಾಗುತ್ತಿದ್ದು ಥರ್ಮಲ್ ಸ್ಕ್ಯಾನಿಂಗ್ ಬಳಕೆ ಮಾಡದಿರುವುದು ಮತ್ತು ನೊಂದಣಿ ಪ್ರಕ್ರೀಯೇ ಸಮಪರ್ಕವಾಗಿ ಆಗದಿ ರುವುದನ್ನು ಕಂಡ ಲೋಕಾಯುಕ್ತ ಪೊಲೀಸ್ ತಂಡ ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಕಛೇರಿಗೆ ಬರುವ ಎಲ್ಲಾ ಸಾರ್ವಜನಿಕರ ನೊಂದಣಿ ಕಡ್ಡಾಯಗೊಳಿಸುವಂತೆ ಸೂಚಿಸಲಾಯಿತು.
ಪರಿಶೀಲನೆ ವೇಳೆ ಕೋವಿಡ್-19 ರ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಗಳು ಸಮಪರ್ಕವಾಗಿ ಪಾಲನೆಯಾಗದಿರುವುದು ಕಂಡು ಬಂದಿರುತ್ತದೆ. ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗ ಸೂಚಿಯನ್ನು ಎಲ್ಲರೂ ಸಮರ್ಪಕವಾಗಿ ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ರಾಜ್ಯ/ಕೇಂದ್ರ ಸರಕಾರದ ಮಾರ್ಗ ಸೂಚಿಗಳ ಪ್ರಕಾರ ನಿಯಮ ಪಾಲಿಸದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಲಾಯಿತು.
ಇದೇ ವೇಳೆ ವಾಣಿಜ್ಯ ಮಳಿಗೆ/ಮಾರುಕಟ್ಟೆ/ಹೊಟೇಲ್‌ಗಳಲ್ಲಿ ಮಾಸ್ಕ ಧರಿಸದೇ ವ್ಯಾಪಾರ ವಹಿವಾಟು ನಡೆಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಈ ವಿಚಾರದಲ್ಲಿ ನಿರ್ಲಕ್ಷ ಸಲ್ಲದು ಎಂಬುದಾಗಿ ಉಡುಪಿ ಲೋಕಾಯುಕ್ತ ಡಿ.ವೈ.ಎಸ್.ಪಿ. ಭಾಸ್ಕರ ವಿ.ಬಿ ತಿಳಿಸಿರುತ್ತಾರೆ.