ಮುಂಬೈ ವಿಡಿಯೋ ರಾಜ್ಯದ್ದು ಎಂದು ಹರಿಬಿಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತೆಯ ಬಂಧನ
ಬೆಂಗಳೂರು: ಮಹಾರಾಷ್ಟ್ರದ ಮುಂಬೈನ ವಿಡಿಯೋವನ್ನು ರಾಜ್ಯದ ಪೊಲೀಸರ ವಿಡಿಯೋ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮಹಿಳೆಯನ್ನು ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾ ಹರೀಶ್ ಬಂಧಿತ ಮಹಿಳೆಯಾಗಿದ್ದು, ಲಾಕ್ಡೌನ್ ಮೊದಲ ದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ವಿಡಿಯೋದಲ್ಲಿ ಪೊಲೀಸರೆಲ್ಲಾ ಸುತ್ತುವರಿದು ವ್ಯಕ್ತಿಯೊಬ್ಬನನ್ನು ಹೊಡೆಯುತ್ತಿದ್ದ ದೃಶ್ಯವಿತ್ತು. ವಿಡಿಯೋ ಕರ್ನಾಟಕದ್ದು ಹಾಗೂ ರಾಜ್ಯ ಪೊಲೀಸರು ದರ್ಪ ತೋರಿದ್ದಾರೆ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ ಆ ಘಟನೆ ಕಳೆದ ವರ್ಷ ಏಪ್ರಿಲ್ 3ರಂದು ಮುಂಬೈನಲ್ಲಿ ನಡೆದಿರುವ ಘಟನೆ ಎಂದು ಕಂಡು ಬಂದಿದೆ. ಈ ಸುಳ್ಳು ಸುದ್ದಿ ಶೇರ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವಿಟರ್ ಮೂಲಕ ಸೂಚನೆ ನೀಡಿದ್ದರು.
ಕೂಡಲೇ ವಿಡಿಯೋ ಹರಿಬಿಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಇಎನ್ ಪೊಲೀಸರು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಪದ್ಮಾ ಹರೀಶ್ ಗೆ ನೊಟೀಸ್ ನೀಡಿದ್ದರು. ಪದ್ಮಾ ಅವರ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಬಳಿಕ ಮಹಿಳೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಮುಂಬೈನ ಹಳೇ ವಿಡಿಯೋಗೆ ವಾಯ್ಸ್ ಮ್ಯಾಚ್ ಮಾಡಿ ವಿಡಿಯೋ ಹರಿಬಿಡಲಾಗಿತ್ತು. ಸದ್ಯ ಪೊಲೀಸರು ವಿಡಿಯೋ ವೈರಲ್ ಏಕೆ ಮಾಡಲಾಗಿತ್ತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ