ಚಂಡಮಾರುತ ಭೀತಿ – ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಡಿಕೇರಿ ನಗರಸಭೆ ಮನವಿ
ಮಡಿಕೇರಿ ಮೇ.12: ಕೊಡಗು ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಡಿಕೇರಿ ನಗರಸಭೆ ಮನವಿ ಮಾಡಿದೆ.
ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಇದೇ ಮೇ 14 ಮತ್ತು 15 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರ ಬಡಾವಣೆಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಗರಸಭೆ ನೋಟಿಸ್ ಜಾರಿ ಮಾಡಿದೆ.
ಈ ಮೂರು ನಗರಗಳಲ್ಲಿ ಬೆಟ್ಟ, ಗುಡ್ಡದ ನಡುವೆಯೇ ನೂರಾರು ಮನೆಗಳಿವೆ. ಅಷ್ಟೇ ಅಲ್ಲದೆ ಕೊಡಗು ಜಿಲ್ಲೆಯ ವಿರಾಜಪೇಟೆ ನಗರದ ಅಯ್ಯಪ್ಪಬೇಟ್ಟ, ನೆಹರು ನಗರ, ಅರಸುನಗರ ಹಾಗೂ ಮಲೇತಿರಿಕೆ ಬೆಟ್ಟದ ನಿವಾಸಿಗಳಿಗೆ ಪಟ್ಟಣ ಪಂಚಾಯಿತಿಯಿಂದಲೂ ನೋಟಿಸ್ ನೀಡಲಾಗಿದೆ. ಕಳೆದ ಮೂರು ವರ್ಷದ ಮಳೆಗಾಲದಲ್ಲಿ ಅರ್ಧ ಬಿದ್ದು ಅಪಾಯದಂಚಿನಲ್ಲಿರುವ ಮನೆಗಳಲ್ಲೇ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ನಗರಸಭೆಯ ನೋಟಿಸ್ ಅವರಿಗೆ ಮತ್ತೊಂದು ಶಾಕ್ ನೀಡಿದ್ದು, ಮುಂದೇನು ಮಾಡವುದು ಎಲ್ಲಿಗೆ ಹೋಗುವುದು ಎಂಬ ಚಿಂತೆ ಕಾಡತೊಡಗಿದೆ.