ಕನಿಷ್ಠ 10,000 ರೂ. ಸಹಾಯಧನ, ಆಹಾರ ಕಿಟ್ ವಿತರಿಸಿ- ಮುಖ್ಯಮಂತ್ರಿಗೆ ಸವಿತಾ ಸಮಾಜ ಮನವಿ
ಉಡುಪಿ ಮೇ. 12(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದರಿಂದ ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ. ಆದರಂತೆ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಸವಿತ ಸಮಾಜದವರಿಗೆ ಸಹಾಯಧನದ ಪ್ಯಾಕೇಜ್ ನೀಡುವಂತೆ ಉಡುಪಿ ಜಿಲ್ಲಾ ಸವಿತಾ ಸಮಾಜ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಸವಿತ ಸಮಾಜದ ವತಿಯಿಂದ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು ಅದರಂತೆ, ಕೋವಿಡ್ ನಿಯಂತ್ರಣ ಕ್ಕೆ ಸರಕಾರ ಜಾರಿ ಮಾಡಿದಲಾಕ್ ಡೌನ್ ನಿಂದ ಸವಿತಾ ಸಮಾಜ ನಲುಗಿ ಹೋಗಿದೆ. 14 ದಿನಗಳ ಕಠಿಣ ಲಾಕ್‌ಡೌನ್ ಪಾರಂಭವಾಗಿದೆ. ಸರಕಾರದ ಆದೇಶವನ್ನು ಅಕ್ಷರಶಃ ಪಾಲಿಸುವ ದಿನಗೂಲಿ ನೌಕರರಂತೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕ್ಷೌರಿಕರ ಬದುಕು ತೀರಾ ಸಂಕಷ್ಟಕ್ಕೆ ಸಿಲುಕಿದೆ.
ಒಂದು ಕಡೆ ಅಂಗಡಿ ಬಾಡಿಗೆ, ಮನೆ ಬಾಡಿಗೆ, ಹಿರಿಯರಿಗೆ ಔಷಧೋಪಚಾರ, ದಿನನಿತ್ಯದ ಮನೆಯ ಖರ್ಚು ಸರಿದೂಗಿಸಲಾಗದೆ ಕ್ಷೌರಿಕರ ಬದುಕು ಚಿಂತಾಜನಕವಾಗಿದೆ. ಸ್ವಾಸ್ಥ್ಯ ಸಾಮಾಜಿಕ ಜೀವನದಲ್ಲಿ ಕ್ಷೌರಿಕರೂ ಕೂಡಾ ಪ್ರಥಮ ವಾರಿಯರ್ ಗುಂಪಿನಲ್ಲಿ ಬರುವುದರಿಂದ ಅವರಿಗೆ ಉಚಿತ ಆರೋಗ್ಯ ಸೇವೆಯ ಚಿಕಿತ್ಸೆ ನೀಡುವುದರೊಂದಿಗೆ, ಒಂದೇ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ಅಲ್ಪಾವಧಿ ಸಮಯದಲ್ಲಾದರೂ ವೃತ್ತಿ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಕನಿಷ್ಠ 10,000 ರೂ. ಸಹಾಯಧನ, ಅದರೊಂದಿಗೆ ಆಹಾರ ಕಿಟ್‌ಗಳ ಪ್ಯಾಕೇಜನ್ನು ವಿತರಿಸಬೇಕು ಹಾಗೂ, ಬಿಪಿಎಲ್ ಪಡಿತರ ಚೀಟಿಯ ಮಾನದಂಡ ಇಲ್ಲದೆ ರಾಜ್ಯದ ಎಲ್ಲಾ ಸವಿತಾ ಸಮಾಜದ ಕ್ಷೌರಿಕ ಬಂಧುಗಳಿಗೆ ಸರಕಾರ ಪ್ಯಾಕೇಜ್ ನೀಡುವ ಕುರಿತು ಆದಷ್ಟು ಬೇಗ ಘೋಷಿಸಿ ಸಂಕಷ್ಟದಲ್ಲಿರುವ ಸವಿತಾ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.