ಗುಣಮುಖರಾದರೂ ಬೆಡ್ ಬಿಟ್ಟುಕೊಡದ ಸೋಂಕಿತರ ವಿರುದ್ಧ ಸಿಎಂ ಯಡಿಯೂರಪ್ಪ ಗರಂ!
ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾದರೂ ಆಸ್ಪತ್ರೆಯಲ್ಲಿಯೇ ಇರುವವರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಆರೋಗ್ಯಸೌಧದಲ್ಲಿರುವ ಕೋವಿಡ್ ವಾರ್ ರೂಮ್, ಬಿಬಿಎಂಪಿ ಪಶ್ಚಿಮ ವಲಯದ ವಾರ್ ರೂಂಗೆ ಹಠಾತ್ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣಮುಖರಾಗಿರುವವರಿಗೆ ವೈದ್ಯರು ಡಿಸ್ಚಾರ್ಜ್ ಆಗುವಂತೆ ಸೂಚಿಸಿದ್ದರೂ ಕೂಡ 20-30 ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಬಹಳ ದಿನದಿಂದ ಆಸ್ಪತ್ರೆಯಲ್ಲಿರುವವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ ನಿಂದಾಗಿ ಆಸ್ಪತ್ರೆಗೆ 1ರಿಂದ 10 ದಿನ ಆಗಿರುವ 6,500, 11 ರಿಂದ 20 ದಿನ ಆಗಿರುವ 1,900, 20 ದಿನ ಮೀರಿದ 503, 30 ದಿನ ಮೀರಿದ 337 ರೋಗಿಗಳು ಹೀಗೆ ಒಟ್ಟು 9,242 ಮಂದಿ ಇದ್ದಾರೆ. 30 ದಿನ ಚಿಕಿತ್ಸೆ ಪಡೆಯುವ ಅಗತ್ಯ ಏನಿದೆ? ಅವರು ಬೇರೆಯವರಿಗೆ ಜಾಗ ಬಿಟ್ಟುಕೊಡಬೇಕು ಎಂದು ಮನವಿ ಮಾಡಿಕೊಂಡರು.
ನಮ್ಮಲ್ಲಿನ ವಾರ್ ರೂಂ ಬಹಳ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ನಮ್ಮ ಕೋವಿಡ್ ವಾರ್ ರೂಂನ ಕಾರ್ಯವೈಖರಿ ದೇಶಕ್ಕೇ ಮಾದರಿಯಾಗಿದೆ. ನಮ್ಮ ಅಧಿಕಾರಿಗಳು ಮೂರು ಪಾಳಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಏನಾದರೂ ಸುಧಾರಣೆ ತರಬೇಕು ಎಂದಾದರೆ ಅದಕ್ಕೆ ಸರ್ಕಾರ ಸಿದ್ಧವಿದೆ ಎಂದು ಶ್ಲಾಘಿಸಿದರು.
ಇದಕ್ಕೂ ಮೊದಲು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವೆಲ್ಲಾ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಿದ್ದೀರಿ. ಸಾವಿನ ಪ್ರಮಾಣ ಹೆಚ್ಚಿರುವುದು ಆತಂಕ ಮೂಡಿಸಿದೆ. ಸಾವಿನ ಪ್ರಮಾಣ ಕಡಿಮೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ನೀವು ಕೂಡ ಸಹಕಾರ ನೀಡುತ್ತಿದ್ದೀರಿ. ನೀವು ಇನ್ನೂ ಹೆಚ್ಚಿನ ಆಸಕ್ತಿಯಿಂದ ಶ್ರಮಿಸಿ. ನಿಮಗೆ ಬರುವ ಮಾಹಿತಿಯನ್ನು ಬೇರೆಯವರಿಗೆ ಸಕಾಲದಲ್ಲಿ ಹಂಚಿಕೊಳ್ಳಿ ಎಂದು ತಿಳಿಸಿದರು.