ಕಾಪು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ- 6 ಆರೋಪಿಗಳ ಸೆರೆ

ಕಾಪು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ ನಡೆಸಿದ ಪೊಲೀಸರು ನಾಲ್ಕು ಕರುಗಳನ್ನು ರಕ್ಷಿಸಿ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಮೂಳೂರು ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆಯ ಬಳಿ ನಡೆದಿದೆ. ಮುಳೂರು ನಿವಾಸಿ ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ (32) , ಮಹಮ್ಮದ್ ಅಜರುದ್ಧೀನ್ (26), ಮಹಮ್ಮದ್ ಹನೀಫ್ ಯಾನೆ ಆಸ್ಪಕ್ (28), ಮಹಮ್ಮದ್ ಇಸ್ಮಾಯಿಲ್ (22), ಚಂದ್ರನಗರ ನಿವಾಸಿ ಉಮ್ಮರಬ್ಬ (60), ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್ (25) ಬಂಧಿತ ಆರೋಪಿಗಳು.

ಪೊಲೀಸ್ ದಾಳಿ ವೇಳೆ ಇಸ್ಮಾಯಿಲ್, ರಫೀಕ್, ಅಬ್ಬು ಮಹಮ್ಮದ್ ಎಂಬ ಮೂವರು ಪರಾರಿಯಾಗಿದ್ದಾರೆ. ಬಂಧತರಿಂದ ನಾಲ್ಕು ಕರುಗಳು, 30 ಕೆ.ಜಿ. ಮಾಂಸ, ಕಸಾಯಿಖಾನೆಯಲ್ಲಿ ಉಪಯೋಗಿಸುತ್ತಿದ್ದ ಸಲಕರಣೆಗಳು, ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಪು ಎಸ್ಐ ರಾಘವೇಂದ್ರ ಸಿ. ಅವರಿಗೆ ದೊರಕಿದ ಖಚಿತ ಮಾಹಿತಿಯಂತೆ, ಸಿಬಂದಿಗಳ ಜೊತೆಗೂಡಿ ಪೊಲೀಸರು ದಾಳಿ ನಡೆಸಲಾಗಿತ್ತು. ಪೊಲೀಸರು ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಮೂಳೂರು ಸುನ್ನಿ ಸೆಂಟರ್‌ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆ ಹತ್ತಿರ ಪಿಕ್‌ಅಪ್‌ ವಾಹನವೊಂದನ್ನು ನಿಲ್ಲಿಸಿದ್ದು, ಮನೆಯ ಸಮೀಪ ನಾಲ್ಕು ಕರುಗಳನ್ನು ಕಟ್ಟಿ ಹಾಕಿದ್ದು ಅಲ್ಲದೇ ಅಲ್ಲೇ ಸಮೀಪದಲ್ಲಿ ಮಾಂಸವನ್ನು ತಯಾರಿ ಮಾಡುತ್ತಿದ್ದುದು ಕಂಡು ಬಂದಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇಸ್ಮಾಯಿಲ್‌ನೊಂದಿಗೆ ಸೇರಿಕೊಂಡು ಆತನ ಸೂಚನೆಯಂತೆ ಮಜೂರು ಪರಿಸರದಿಂದ 5 ಬಿಡಾಡಿ ದನದ ಕರುಗಳನ್ನು ಪಿಕ್ ಅಪ್ ವಾಹನದಲ್ಲಿ ಕದ್ದು ತಂದು, ಅದರಲ್ಲಿ 1 ಕರುವನ್ನು ಕಡಿದು  ಮಾಂಸ ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!