ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆಗೆ ದಿನಗಣನೆ?
ಬೆಂಗಳೂರು: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬದಲಾವಣೆಯ ಕೂಗು ರಾಜಕೀಯ ಪಡಸಾಲೆಯಲ್ಲಿ ಮತ್ತೆ ಬಹಳ ಸದ್ದು ಮಾಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಬದಲಾವಣೆಗೆ, ತಡ ಮಾಡದೆ ಗಟ್ಟಿ ತೀರ್ಮಾನಕ್ಕೆ ಮುಂದಾಗಿರುವ ಸಾಧ್ಯತೆ ನಿಚ್ಚಳವಾಗಿದೆ.
ಬಿಜೆಪಿಯ ತತ್ವ, ಸಿದ್ಧಾಂತ ಸಿದ್ಧಾಂತಗಳಿಗೆ ವಿರುದ್ಧವಾಗಿ ಮರಳಿ ಬಿಜೆಪಿಗೆ ಬಂದು ಅಧ್ಯಕ್ಷ ಪಟ್ಟ, ನಂತರ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ಅದನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದೇ ರಾಜಕೀಯವಾಗಿ ಸೋಜಿಗದ ಸಂಗತಿ..!!
ಪಕ್ಷಪಾತ, ಭ್ರಷ್ಟಾಚಾರ, ದೂರದೃಷ್ಟಿಯಿಲ್ಲದೆ ಆಡಳಿತ, ಗಂಟೆಗೊಂದು, ಘಗಳಿಗೆಗೊಂದು ತೀರ್ಮಾನ ನಡುವೆಯೂ ಇಲ್ಲಿಯವರೆಗೂ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವುದರ ಹಿಂದೆ ಹೈಕಮಾಂಡ್ ಪ್ರಮಾದವೂ ಇದೆ.
ಈ ಜನ್ಮದಲ್ಲಿ ಮರಳಿ ಬಿಜೆಪಿಗೆ ಬರುವುದಿಲ್ಲ ಎಂದು ಪಕ್ಷದಿಂದ ಹೊರಹೋಗಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಮತ್ತೆ ಅಚ್ಚರಿಯ ರೀತಿಯಲ್ಲಿ ಬಿಜೆಪಿಗೆ ಮರಳಿದ್ದು ಮತ್ತು ರಾಜ್ಯ ಅಧ್ಯಕ್ಷ ಪಟ್ಟ ಆನಂತರ ಮುಖ್ಯಮಂತ್ರಿ ಗಾದಿ ಪಡೆದುಕೊಂಡಿದ್ದನ್ನು ನೋಡಿದರೆ ರಾಜ್ಯ ಬಿಜೆಪಿಯಲ್ಲಿ ಎಂತಹ ಶೋಚನೀಯ ಪರಿಸ್ಥಿತಿ ಇದೆ. ನಾಯಕತ್ವದ ಕೊರತೆಯಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆದಿರುವ ವಿದ್ಯಮಾನಗಳನ್ನು ಗಮನಿಸಿ ಮತ್ತು ವಿಶ್ಲೇಷಣೆ ಮಾಡಿ ನೋಡಿದರೆ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಶರವೇಗದಲ್ಲಿ ದಾಪುಗಾಲು ಹಾಕಲು ಹೊರಟಿದೆ ಎಂಬ ಸಂದೇಶ ರವಾನೆಯಾಗಿದೆ. ಅದರಲ್ಲೂ ಕೊರೋನಾ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ಮತ್ತು ಜನರಿಗೆ ಸರಿಯಾದ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರ ಹೆಜ್ಜೆ, ಹೆಜ್ಜೆಗೂ ಎಡವಿರುವುದು ಮತ್ತು ಸರ್ಕಾರದ ವಿರುದ್ಧ ದಿನೇ, ದಿನೇ ಸಾರ್ವಜನಿಕ ವಲಯದಲ್ಲಿ ಅಸಮಾಧಾನ, ಆಕ್ರೋಶ ಭುಗಿಲೆದ್ದಿರುವುದನ್ನು ಮನಗಂಡಿರುವ ಬಿಜೆಪಿ ನಾಯಕರು ಅವಸರದ ತೀರ್ಮಾನ ತೆಗೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಹೇಳಲಾಗುತ್ತಿದೆ.
ಈ ಸುಳಿವು ಅರಿತ ಮುಖ್ಯಮಂತ್ರಿ ಯಡಿಯೂರಪ್ಪ, ಒಂದು ರೀತಿಯಲ್ಲಿ ತಮ್ಮ ರಾಜಕೀಯ ಸಂದೇಶ ದೂತರನ್ನಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕಳುಹಿಸಿಕೊಟ್ಟು ಹೈಕಮಾಂಡ್ ಮುಂದೆ ಯಾವ ರೀತಿಯ ತೀರ್ಮಾನ ಮಾಡಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ಅಷ್ಟೇ ಅಲ್ಲ, ತಾವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುವುದಾದರೆ, ಬಸವರಾಜ ಬೊಮ್ಮಾಯಿ ಅವರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಸಲಹೆ ಕೊಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.
ಹಾಗೆ ನೋಡಿದರೆ, ಬಿಜೆಪಿ ಹೈಕಮಾಂಡ್ ಆರಂಭದಿಂದಲೂ ಯಡಿಯೂರಪ್ಪನವರ ಮುಂದುವರಿಕೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟುಕೊಂಡೇ ಬಂದಿದೆ. ಯಾವ ಸಮಯದಲ್ಲಿ ಯಡಿಯೂರಪ್ಪನವರನ್ನು ಬದಲಾವಣೆ ಮಾಡಬೇಕು? ಹೇಗೆ ಮಾಡಬೇಕು? ಅದರಿಂದ ಮುಂದೆ ಆಗಬಹುದಾದ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಸಾಗಿದೆ. ಆದರೆ ಅವರನ್ನು ಬದಲಾವಣೆ ಮಾಡಿ, ಮತ್ತೆ ಅದೇ ಸಮುದಾಯದ ಲಿಂಗಾಯಿತ ನಾಯಕನಿಗೆ ಪಟ್ಟಕಟ್ಟಲು ಹಲವಾರು ತಿಂಗಳಿಂದ ಹುಡುಕಾಟ ನಡೆಸುತ್ತಲೇ ಇದೆ. ಇಂದಿಗೂ ಯಾರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಆದರೆ ಲಿಂಗಾಯಿತ ಸಮುದಾಯದ ನಾಯಕನಿಗೆ ಮಾತ್ರವೇ ಪಟ್ಟಕಟ್ಟಬೇಕು. ಅದನ್ನು ಹೊರತುಪಡಿಸಿ ಬೇರೆಯವರಿಗೆ ಕಟ್ಟಬಾರದು. ಕಟ್ಟಿದರೆ ಮುಂದೆ ರಾಜಕೀಯವಾಗಿ ಅನುಕೂಲವಾಗುವುದಕ್ಕಿಂತ ಅನಾನುಕೂಲವಾಗುವುದೇ ಹೆಚ್ಚು ಎಂಬುದನ್ನು ಹೈಕಮಾಂಡ್ ನಾಯಕರು ಚೆನ್ನಾಗಿ ಅರಿತುಕೊಂಡಿದ್ದಾರೆ.
ಅಲ್ಲಿಗೆ ಒಂದು ವಿಚಾರ ಸ್ಪಷ್ಟವಾಗುತ್ತಿದೆ. ಯಡಿಯೂರಪ್ಪ ಬದಲಾವಣೆ ನಂತರವೂ ಲಿಂಗಾಯತ ಸಮುದಾಯದ ನಾಯಕನಿಗೆ ಪಟ್ಟಕಟ್ಟುವ ವಿಚಾರದಲ್ಲಿ ಹೈಕಮಾಂಡ್ ನಲ್ಲಿ ಯಾವುದೇ ಗೊಂದಲವೂ ಇಲ್ಲ, ಅನುಮಾನಗಳೂ ಇಲ್ಲ.
ಸರಿ, ಹಾಗಾದರೆ, ಯಾರಿಗೆ ಪಟ್ಟಕಟ್ಟಬಹುದು? ಜಗದೀಶ್ ಶೆಟ್ಟರ್, ಅರವಿಂದ ಬೆಲ್ಲದ, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಶಿವಕುಮಾರ ಉದಾಸಿ ಹೀಗೆ ಸಾಲು ಸಾಲು ಹೆಸರನ್ನು ಸೇರಿಸಿಕೊಂಡು ಅವರನ್ನು ಮಾಡಿದರೆ ಹೇಗೆ? ಇವರನ್ನು ಮಾಡಿದರೆ ಹೇಗೆ? ಎಂಬ ಲೆಕ್ಕಾಚಾರದಲ್ಲೇ ಇಲ್ಲಿಯವರೆಗೂ ಲೆಕ್ಕಚಾರ ಹಾಕಿದೆ. ಆದರೆ ಇನ್ನು ಹೆಚ್ಚು ತಡಮಾಡುವ ಸ್ಥಿತಿಯಲ್ಲಿ ಕೇಂದ್ರದ ನಾಯಕರು ಇದ್ದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಿಂದ ನೋಡಿದರೆ, ಯಡಿಯೂರಪ್ಪ ಬದಲಾವಣೆಗೆ ದಿನಗಣನೆ ಆರಂಭವಾಗಿದೆ ಎಂದರೆ ಅದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.
ಬಿಜೆಪಿ ಹೈಕಮಾಂಡು ಮುಂದಿನ ಮುಖ್ಯಮಂತ್ರಿಗೆ ಪಟ್ಟಕಟ್ಟಲು ತನ್ನದೇ ಆದ ನಿಯಮಗಳನ್ನು, ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಕೇವಲ ಬಿಜೆಪಿ ಶಾಸಕರಾದರೆ ಮಾತ್ರ ಸಾಲದು. ಅವರಿಗೆ ಸಂಘ ಪರಿವಾರದ ಹಿನ್ನೆಲೆ ಇರಲೇಬೇಕು ಎಂಬ ನಿಯಮವೇ ಯಡಿಯೂರಪ್ಪನವರ ಬದಲಾವಣೆಗೆ ಸದ್ಯದ ಅಡ್ಡಿಯಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಆರ್.ಎಸ್.ಎಸ್. ಹಿನ್ನೆಲೆ ಇದೆ. ಬಿಜೆಪಿಯ ಮಾನದಂಡಗಳ ಪ್ರಕಾರ ಅವರು ಹೆಚ್ಚು ಅರ್ಹರಾಗಿದ್ದಾರೆ. ಆದರೆ ಅವರು ಈಗಾಗಲೇ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಎರಡನೆಯದಾಗಿ ಅವರಿಗಿರುವ ದೌರ್ಬಲ್ಯ ಎಂದರೆ ಬಹಳ ಸಾಧು, ಸಜ್ಜನ. ಎಲ್ಲರನ್ನೂ ಬಿಗಿಯಾಗಿ ನಿಭಾಯಿಸಲು ಅವರಿಂದ ಸಾಧ್ಯವಾಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿದೆ.
ಆದರೆ ರಾಜ್ಯದಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಬಿಜೆಪಿಯ ಪಾಳಯದಲ್ಲೂ ಯಡಿಯೂರಪ್ಪನವರ ಆಡಳಿತದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಅಸಮಾಧಾನ, ಆಕ್ರೋಶ ಒಳಗೊಳಗೇ ಭುಗಿಲೆದ್ದಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ನೋಡಿದರೆ, ಮರಳಿ ಜಗದೀಶ್ ಶೆಟ್ಟರ್ ಅವರಿಗೆ ಪಟ್ಟಕಟ್ಟಲೂಬಹುದು. ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಶಿವಕುಮಾರ್ ಉದಾಸಿ ಅವರಿಗೆ ಸಂಘಪರಿವಾರದ ಹಿನ್ನೆಲೆ ಇಲ್ಲದ ಕಾರಣ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲೂಬಹುದು. ಅದರಲ್ಲೂ ಬಸವರಾಜ ಬೊಮ್ಮಾಯಿ ಅವರನ್ನು ಪರಿಗಣಿಸದೇ ಇರುವುದಕ್ಕೆ ಅವರು ಯಡಿಯೂರಪ್ಪನವರ ಶಿಷ್ಯ ಎಂಬುದೇ ಮತ್ತೊಂದು ಹಿನ್ನಡೆಗೆ ಕಾರಣವಾಗಲಿದೆ. ಯುವಕರಿಗೆ ಪಟ್ಟಕಟ್ಟುವ ಲೆಕ್ಕಾಚಾರಕ್ಕೆ ಬಿಜೆಪಿ ನಾಯಕರು ಮಣೆ ಹಾಕಿದರೆ, ಹಾಲಿ ಸಂಸದ ಶಿವಕುಮಾರ ಉದಾಸಿ ಅವರಿಗೂ ಒಂದು ಅವಕಾಶ ಕೊಡಬಹುದು ಎನ್ನಲಾಗಿದೆ.
ಯಡಿಯೂರಪ್ಪ ಬದಲಾವಣೆಯೊಂದಿಗೆ ಬಿಜೆಪಿ, ಮನೆಯೊಂದು ಮೂರು ಬಾಗಿಲು ಎಂಬ ಹಾದಿಯಲ್ಲೇ ಮುಂದಿನ ಕತೆ ಸಾಗಬಹುದು. ಏನೇ ಆಗಲಿ, ಇನ್ನು ತಡಮಾಡದೇ ಬಿಜೆಪಿ ಹೈಕಮಾಂಡ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸ್ಪಷ್ಟ, ಗಟ್ಟಿ ತೀರ್ಮಾನ ತೆಗೆದುಕೊಳ್ಳುವುದು ನಿಶ್ಚಿತ ಎನ್ನಲಾಗಿದೆ.