ನಿರುದ್ಯೋಗಿಗಳಿಗೆ ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶ: ಜಿಲ್ಲಾಧಿಕಾರಿ

ಉಡುಪಿ : ‘ಸುವರ್ಣಪರ್ವ’ವನ್ನು ಸಮಾಜಮುಖಿಯಾಗಿ ಆಚರಿಸುವ ಸಂಕಲ್ಪದೊಂದಿಗೆ ನಿಟ್ಟೂರು ಪ್ರೌಢಶಾಲೆ ಕೈಗೊಂಡ ಹಡಿಲು ಗದ್ದೆ ಕೃಷಿ ಅಭಿಯಾನವನ್ನು ನಿಟ್ಟೂರಿನ ಗದ್ದೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ರವರು ಸಂಕೇತಿಕವಾಗಿ ನೇಜಿಯನ್ನು ಕ್ರಿಯಾ ಸಮಿತಿಯ ಸಂಚಾಲಕರಾದ ರಂಜನ್ ಶೆಟ್ಟಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ತಾನು ಕೃಷಿ ಕುಟುಂಬದಿಂದ ಬಂದವನು. ಕೃಷಿಯನ್ನು ಶ್ರದ್ಧೆಯಿಂದ ಆಧುನಿಕ ಪದ್ದತಿಯೊಂದಿಗೆ ಮಾಡಿದಲ್ಲಿ ಖಂಡಿತವಾಗಿಯೂ ಒಳ್ಳೆಯ ಆದಾಯಕ್ಕೆ ಮೋಸವಾಗಲಾರದು. ಕರೋನಾದ ಸಂಕಷ್ಟ ಕಾಲದಲ್ಲಿ ನಿರುದ್ಯೋಗಿಗಳಿಗೆ ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶವಿದೆ. ಒಂದು ಶಾಲೆ ತನ್ನ ಸುವರ್ಣಪರ್ವವನ್ನು ಈ ರೀತಿಯ ಸಮಾಜಮುಖಿಯಾದ ಚಟುವಟಿಕೆಯೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. ಇದೊಂದು ಚಳುವಳಿಯಾಗಬೇಕಾಗಿದೆ. ಗದ್ದೆಯನ್ನು ಹಡಿಲು ಬಿಡುವುದು ಕಾನೂನಾತ್ಮಕವಾಗಿಯೂ ಸಮ್ಮತವಾದುದಲ್ಲ. ನಿಮ್ಮ ಅಭಿಯಾನಕ್ಕೆ ವಯಕ್ತಿಕವಾಗಿ ಸಂಪೂರ್ಣ ಬೆಂಬಲ ಪ್ರೋತ್ಸಾಹವಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕರಾದ ಕೆ. ರಘುಪತಿ ಭಟ್ ಮಾತನಾಡಿ, ಕೃಷಿ ಕಾಯಕ ಎಂದರೆ ಅದು ಒಂದು ದೇಶ ಸೇವೆ. ನಮ್ಮ ಹಿರಿಯರ ಪ್ರಕಾರ ಕೃಷಿ ಭೂಮಿಯನ್ನು ಹಡಿಲು ಬಿಡುವುದು ಮಹಾ ಪಾಪವಿದ್ದಂತೆ. ಕೃಷಿ ಭೂಮಿಯನ್ನು ಎಂದಿಗೂ ಬರಡು ಬಿಡಬಾರದು. ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದ ನಿಟ್ಟೂರು ಪ್ರೌಢಶಾಲೆ ತನ್ನ ಸುವರ್ಣಪರ್ವವನ್ನು ಹಡಿಲು ಗದ್ದೆ ಕೃಷಿ ಅಭಿಯಾನದ ಮೂಲಕ ಆಚರಿಸುತಿರುವುದು ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ ಉಳಿದ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ನುಡಿದರು.


ಶಾಲಾ ಮುಖ್ಯಶಿಕ್ಷಕ ಮುರಲಿ ಕಡೆಕಾರ್ ಮಾತನಾಡಿ ಇಂದು ನಿಟ್ಟೂರಿನಲ್ಲಿ ಉದ್ಘಾಟನೆಗೊಂಡ ಈ ಅಭಿಯಾನ ಮುಂದೆ ಪುತ್ತೂರು, ಕಕ್ಕುಂಜೆ, ಕರಂಬಳ್ಳಿ ಹಾಗೂ ಪೆರಂಪಳ್ಳಿಯಲ್ಲಿ ಸುಮಾರು ೫೦ ಎಕ್ರೆ ಹಡಿಲು ಗದ್ದೆ ನಾಟಿ ಕಾರ್ಯದ ಮೂಲಕ ಮುನ್ನಡೆಯಲಿದೆ. ಇದರಿಂದ ಪ್ರೇರಿತರಾಗಿ ಸುಮಾರು ೧೦ ಎಕ್ರೆ ಗದ್ದೆ ಬೇಸಾಯ ಮಾಡಲು ಕೃಷಿಕರು ಮುಂದೆ ಬಂದಿದ್ದಾರೆ. ಸುಮಾರು ೨೫ ಎಕ್ರೆ ಗದ್ದೆ ನಾಟಿ ಯಂತ್ರದ ಮೂಲಕ ಆಧುನಿಕ ವಿಧಾನದಲ್ಲಿ ನೆರವೇರಲಿದ್ದು, ಉಳಿದ ಗದ್ದೆಗಳನ್ನು ಕೈಯಲ್ಲಿ ನಾಟಿ ಮಾಡಲು ಹಳೆವಿದ್ಯಾರ್ಥಿಗಳು, ರಕ್ಷಕರು ಹಾಗೂ ವಿದ್ಯಾರ್ಥಿಗಳು ಸಜ್ಜಗಿದ್ದಾರೆ ಎಂದು ನುಡಿದರು.


ಈ ಸಂದರ್ಭದಲ್ಲಿ ಗದ್ದೆಯ ಮಾಲಕರಿಗೆ ಸಾಗುವನಿ ಗಿಡ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿಗಳನ್ನು ಶಾಸಕರು ಸುವರ್ಣ ಫಲಕ ನೀಡಿ ಗೌರವಿಸಿದರು. ಹಡಿಲು ಗದ್ದೆ ಕೃಷಿ ಅಭಿಯಾನವನ್ನು ನಿಟ್ಟೂರು ಪ್ರೌಢಶಾಲೆಯ ಸ್ಥಾಪಕ ಸದಸ್ಯರು ಹಾಗೂ ಕೃಷಿಕರು ಆಗಿದ್ದ ಇತ್ತೀಚಿಗೆ ನಿಧಾನರಾದ ಪಿ.ಎಂ. ರಾಮಕೃಷ್ಣ ಆಚಾರ್ಯ ಮತ್ತು ಪಿ ರಾಮ್ ಭಟ್ ಇವರ ಸ್ಮರಣೆಯಲ್ಲಿ ಮುನ್ನಡೆಸಲಾಗುವುದು.


ಸ್ಥಳೀಯ ಕೌನ್ಸಿಲರ್ ಸಂತೋಷ್ ಜತ್ತನ್, ಕಕ್ಕುಂಜೆ ಕೌನ್ಸಿಲರ್ ಬಾಲಕೃಷ್ಣ ಶೆಟ್ಟಿ, ನಿಟ್ಟೂರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಎಸ್.ವಿ. ಭಟ್, ಕಾರ್ಯದರ್ಶಿ ಭಾಸ್ಕರ ಡಿ. ಸುವರ್ಣ, ವೇಣುಗೋಪಾಲ ಆಚಾರ್ಯ, ಹಾಗೂ ಶಾಲಾ ಹಳೆವಿದ್ಯಾರ್ಥಿಗಳಾದ ಪ್ರದೀಪ್ ಜೋಗಿ, ಪಿ. ದಿನೇಶ್ ಪೂಜಾರಿ, ಸಂತೋಷ್ ಕರ್ನೇಲಿಯೊ, ಹರೀಶ್ ಆಚಾರ್ಯ, ಡಾ| ಪ್ರತಿಮಾಜಯಪ್ರಕಾಶ್, ಶಶಿಪ್ರಭಾ ಕಾರಂತ್, ರಾಜು ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ, ಡೋನಾಲ್ಡ್ ಡಿಸೋಜ, ರಾಕೇಶ್ ಶೆಟ್ಟಿ, ಲೋಕೇಶ್, ಯೋಗೀಶ್ ಸುವರ್ಣ, ಮಿಥುನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸುವರ್ಣಪರ್ವ ಸಮಿತಿ ಅಧ್ಯಕ್ಷ ಯೋಗಿಶ್ಚಂದ್ರಧರ್ ಧನ್ಯವಾದ ಸಮರ್ಪಿಸಿದರು. ಬಳಿಕ ಮಹಾಬಲ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಅರ್ಧ ಎಕ್ರೆ ಗದ್ದೆಯನ್ನು ಶಾಲಾ ಹಳೆವಿದ್ಯಾರ್ಥಿಗಳು ಮತ್ತು ಊರವರು ಸೇರಿ ಕೈಯಲ್ಲಿ ನಾಟಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!