ಅಜೆಕಾರು: ಅಸ್ವಸ್ಥಗೊಂಡು ವ್ಯಕ್ತಿ ಮೃತ್ಯು
ಅಜೆಕಾರು ಮೇ.11(ಉಡುಪಿ ಟೈಮ್ಸ್ ವರದಿ): ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಜೆಕಾರಿನಲ್ಲಿ ನಡೆದಿದೆ. ಜಾಯ್ ಪಿ.ಜೆ (53) ಮೃತ ಪಟ್ಟವರು.
ಬೆಳ್ತಂಗಡಿಯಲ್ಲಿ ಇದ್ದ ಇವರು 1 ವಾರದ ಹಿಂದೆಯಷ್ಟೇ ಕಡ್ತಲ ಗ್ರಾಮದ ಪೆಲತಕಟ್ಟೆಗೆ ಬಂದಿದ್ದರು. ಅವರು ಮುಂಚಿನಿಂದಲೂ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು,ಈ ಬಗ್ಗೆ ಉಜಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮೇ.10ರಂದು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಹೆಬ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮನೆಯಲ್ಲಿದ್ದ ವೇಳೆ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.