ಜನರ ಸಮಸ್ಯೆ ಪರಿಹರಿಸುವ ಬದಲು ಪ್ರತಿಭಟನೆ ಮಾಡಿ ಸಂಸದೆ ಶೋಭಾ- ವಿನಯ್ ಕುಮಾರ್ ಸೊರಕೆ

ಉಡುಪಿ ಮೇ.10(ಉಡುಪಿ ಟೈಮ್ಸ್ ವರದಿ): ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸೋಂಕು ನಿವಾರಣೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ, ಕೋವಿಡ್ ನಿಯಂತ್ರಣದ ಸಲುವಾಗಿ ಕೈಗೊಂಡಿರುವ ಕಾರ್ಯದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ ಎಂದು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ನಿವಾರಿಸಲು ಸರ್ವ ಪಕ್ಷ ಸಭೆ ಕರೆದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ಸುಧಾರಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಆದರೆ ಈ ಪರಿಸ್ಥಿತಿಯಲ್ಲಿ ನಮ್ಮ ಸಂಸದರು ಪಶ್ಚಿಮ ಬಂಗಾಳದಲ್ಲಿ ಚುನಾವಣ ಫಲಿತಾಂಶ ಬಳಿಕ ನಡೆದ ಗಲಭೆ ಬಗ್ಗೆ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಾರೆ. ಅಲ್ಲಿ ಗಲಭೆ ನಡೆಯುವುದು ಹೊಸತೇನಲ್ಲ ಆದರೆ ಇಲ್ಲಿನ ಪರಿಸ್ಥಿತಿ ಬಿಟ್ಟು ಅಲ್ಲಿನ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬೆಡ್ ಬ್ಲಾಕಿಂಗ್ ದಂಧೆ ಕುರಿತು ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ಅವರು ಒಂದು ಕೋಮಿನ ಸದಸ್ಯರನ್ನು ಗುರಿಯಾಗಿಸಿಟ್ಟುಕೊಂಡು ಈ ದಂಧೆಯನ್ನು ಒಂದು ಕೋಮಿನ ಮೇಲೆ ಹೊರಿಸುವಂತಹ ಉದ್ದೇಶದಿಂದ  ಬಿಬಿಎಂಪಿ ವಾರ್ ರೂಮ್ ನಲ್ಲಿ ಕೆಲಸ ಮಾಡುವ ಒಂದು ಕೋಮಿಗೆ ಸಂಬಂಧಿಸಿದ ಸದಸ್ಯರ ಹೆಸರುಗಳನ್ನು ಮಾತ್ರ ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಅವರ ಲೋಪದೋಷಗಳನ್ನು ಮುಚ್ಚಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. 

ಜಿಲ್ಲೆಯಲ್ಲಿ ‌ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳನ್ನೇ  ಉಸ್ತುವಾರಿ ಮಾಡಲು ಅವಕಾಶ ಇರುವಾಗ ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಮಾಡಿರುವುದರಿಂದ ಅವರು ಇಲ್ಲಿಗೆ ಭೇಟಿ ನೀಡುವುದು ಅಪರೂಪವಾಗಿದೆ. ಒಂದು ವೇಳೆ ಭೇಟಿ ನೀಡಿದರೂ ಉಸ್ತುವಾರಿ ಸಚಿವರು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಹಾಗೂ ಒಂದೆರಡು ಕಡೆ ಭೇಟಿ ನೀಡಿದ್ದಾರೆಯೇ ವಿನಹ ಕೋವಿಡ್ ನಿರ್ವಹಣೆಯ ಪೂರ್ವ ತಯಾರಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಸ್ವಚ್ಚತಾ ಕಾರ್ಯದಲ್ಲಿ ‌ಕಾರ್ಮಿಕರು ಪರಿಶ್ರಮ ಪಡುತ್ತಾರೆ ಹಾಗೂ ತಮ್ಮ ಮನೆಯ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಓದಿಸುತ್ತಾರೆ ಆದರೆ  ಇಂತಹ ಕಾರ್ಯಗಳಲ್ಲಿ ಸ್ವವಚ್ಚತಾ ಕಾರ್ಯ, ಬೇಟಿ ಬಚಾವೊ ಮೊದಲಾದ ಕಾರ್ಯಕ್ರಮಗಳಲ್ಲಿ ಪ್ರಧಾನಿಗಳು ಭಾವಚಿತ್ರ ಬಳಸಿ‌ ಜನರನ್ನು ಮರುಳು ಮಾಡಿ ದಾರಿ ತಪ್ಪಿಸುವ ಕೆಲಸ ಬಿಡಬೇಕು ಎಂದರು. 

ಕೋರೋನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣ
ಕೋರೋನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ . ರಾಜ್ಯ ಸರಕಾರದ ಸಚಿವರುಗಳಲ್ಲಿ ಸಮನ್ವಯದ ಕೊರತೆ ಹಾಗೂ ಕೊರೊನಾ ವೈರಸ್ ಹೆಸರಲ್ಲಿ ರಾಜ್ಯ ಸರಕಾರ ದಂಧೆಗೆ ತೊಡಗಿರುವುದು ಜನರಲ್ಲಿ ಸೋಂಕು ಹಬ್ಬಲು ಕಾರಣವಾಗಿದೆ. ವೈರಸ್ ತಡೆಯುವಲ್ಲಿ ಸರಕಾರದ ನಿರ್ಧಾರಗಳು ಕ್ಷಣ ಕ್ಷಣಕ್ಕೂ ಬದಲಾವಣೆಗೊಳ್ಳುವುದರಿಂದ ಸೋಂಕನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

 2ನೇ ಹಂತದ ಲಸಿಕೆಗಾಗಿ ಜಿಲ್ಲಾಡಳಿತವು ಉಡುಪಿ ಸೈಂಟ್ ಸಿಸಿಲಿಸ್ ಶಾಲೆಯನ್ನು ಕೇಂದ್ರವಾಗಿ ಘೋಷಿಸಿದೆ. ಆದರೆ ಈಗಾಗಲೇ ಗ್ರಾಮಾಂತರ ಪ್ರದೇಶದ ಜನತೆ ತಮ್ಮ ಪ್ರಥಮ ಲಸಿಕೆಯನ್ನು ಪ್ರಾಥಮಿಕ ಕೇಂದ್ರಗಳಲ್ಲಿ ಪಡೆದವರು ದ್ವಿತಿಯ ಲಸಿಕೆಗಾಗಿ ಜಿಲ್ಲಾ ಕೇಂದ್ರವಾದ ಉಡುಪಿಗೆ ಬರಲು ಸಾಧ್ಯವೇ? ಆದ್ದರಿಂದ  ಜಿಲ್ಲಾಡಳಿತ ಈ ಹಿಂದಿನಂತೆಯೇ ಗ್ರಾಮಾಂತರ ಜನತೆಗೆ ಪ್ರಾಥಮಿಕ ಕೇಂದ್ರಗಳಲ್ಲಿಯೇ ಎರಡನೇ ಹಂತದ ಲಸಿಕೆ ನೀಡುವಂತೆ ಏರ್ಪಾಡು ಮಾಡಬೇಕು‌.
ಹಾಗೂ ಗ್ರಾಮಾಂತರ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಔಷದ ಕೊರತೆ ಯಿಂದ ಲಸಿಕೆ ವಿತರಣೆ ಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಜಿಲ್ಲಾಡಳಿತ  ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಹಳ್ಳಿ ಪ್ರದೇಶದಲ್ಲಿ ಕೃಷಿ ಕೆಲಸಗಳು ಪ್ರಾರಂಭಗೊಂಡಿದ್ದು, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಕೃಷಿ ಕೆಲಸಕ್ಕಾಗಿ ಕೃಷಿಕರು ಅಲೆದಾಡುತ್ತಿದ್ದಾರೆ. ಹೀಗಿರುವಾಗ ಕೃಷಿ ಕಾರ್ಮಿಕರಲ್ಲಿ ಯಾರಿಗೆ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಗಿದೆ. ಕೃಷಿ ಕಾರ್ಮಿಕರಲ್ಲಿ ಸೋಂಕು ಹರಡುವ ಮೊದಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.

ಇನ್ನೂ ಕೋವಿಡ್  ಸೋಂಕು ತಡೆಯುವಲ್ಲಿ ಸರಕಾರಗಳು ಎಡವಿದೆ ಎಂದ ಅವರು, ಒಂದನೇ ಅಲೆಯ ಅವಧಿಯಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದ್ದರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಇರುವುದು. 2ನೇ ಅಲೆ ಅಪ್ಪಳಿಸಿ ದೇಶದಲ್ಲಿ 349 ಮತ್ತು ರಾಜ್ಯದಲ್ಲಿ 13 ಮಂದಿ ಮೃತಪಟ್ಟ ಹೊರತಾಗಿಯೂ ವಿವಿಧ ಸ್ಥಳೀಯ ಸಂಸ್ಥೆ, ಉಪಚುನಾವಣೆ, ಮತ್ತು 5 ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆನಡೆಸಿದ್ದು. ಹಾಗೂ ಮುನ್ನಚ್ಚರಿಕಾ ಕ್ರಮವಾಗಿ ಆಕ್ಸಿಜನ್ ಸಂಗ್ರಹಿಸಿಟ್ಟು ಕೊಳ್ಳದ್ದು, ಕೇಂದ್ರ ಸರಕಾರದ ಒತ್ತಾಸೆಯ ಮೇರೆಗೆ ಇಲ್ಲಿನ ಆಕ್ಸಿಜನ್  ಘಟಕಗಳಿಂದ ಗುಜರಾತ್, ಉತ್ತರ ಪ್ರದೇಶಗಳಿಗೆ ಕಳುಹಿಸುವ ಬೇಜವಾಬ್ದಾರಿತನ ತೋರಿಸಿದ್ದು ಕೋವಿಡ್ ಮಿತಿ ಮೀರಿ ಹರಡಲು ಕಾರಣ ಎಂದರು.

Leave a Reply

Your email address will not be published. Required fields are marked *

error: Content is protected !!