ಬೆಂಗಳೂರಿನಲ್ಲಿ ಮುಂದಿನ ವಾರದ ನಂತರ ಕೋವಿಡ್-19 ಎರಡನೇ ಅಲೆ ತಗ್ಗುವ ಸಾಧ್ಯತೆ: ತಜ್ಞರ ಹೇಳಿಕೆ
ಬೆಂಗಳೂರು: ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಸಾಂಕ್ರಾಮಿಕದಿಂದ ಹೆಚ್ಚು ಭಾದಿತ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ರಾಜ್ಯವಾಗಿದೆ. ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಮೇ 17ರ ನಂತರ ಕೋವಿಡ್ ಎರಡನೇ ಅಲೆ ತಗ್ಗುವ ಸಾಧ್ಯತೆಯಿರುವುದಾಗಿ ತಜ್ಞರು ಹೇಳಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ಇಲಾಖೆಯ ಪ್ರಕಾರ, ಮುಂದಿನ ವಾರದ ನಂತರ ಬೆಂಗಳೂರಿನಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು ಹೆಚ್ಚಳವಾಗಲಿದ್ದು, ಜೂನ್ 11ರೊಳಗೆ ಬೆಂಗಳೂರಿನಲ್ಲಿ 14 ಸಾವಿರ ಜನರು ಕೋವಿಡ್ ಗೆ ಬಲಿಯಾಗುವ ಸಾಧ್ಯತೆಯಿರುವುದಾಗಿ ಅಂದಾಜಿಸಲಾಗಿದೆ ಎಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.
ಪ್ರಸ್ತುತ ನಡೆಯುತ್ತಿರುವ ಲಸಿಕೆ ಅಭಿಯಾನ ಹಾಗೂ ರಾಜ್ಯಾದಾದ್ಯಂತ ಹೇರಲಾಗಿರುವ ಲಾಕ್ ಡೌನ್ ನಂತರ ಕಠಿಣ
ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಂಡಿದ್ದು, ಮುಂದೆ ಕೋವಿಡ್-19 ಅಲೆ ತಗ್ಗುವುದಾಗಿ ಬೆಂಗಳೂರು ಮೂಲದ ಸಂಸ್ಥೆ ಮಾಹಿತಿ ನೀಡಿದೆ.
ಕಳೆದ ವರ್ಷ ಕೂಡಾ ಐಐಎಸ್ ಸಿ ಇದೇ ರೀತಿಯ ಅಂದಾಜು ಮಾಡಿತ್ತು. ಸದ್ಯ ನಡೆಯುತ್ತಿರುವ ಲಸಿಕೆ, ಲಾಕ್ ಡೌನ್ ಪರಿಸ್ಥಿತಿ, ಪ್ರತಿನಿತ್ಯ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪಿಡಿಇ ಮಾಡೆಲ್ ಆಧಾರದ ಮೇಲೆ ತಜ್ಞರು ಈ ರೀತಿಯಾಗಿ ಅಂದಾಜಿಸಿದ್ದಾರೆ.
ರಾಜ್ಯ ಸರ್ಕಾರ ಮೇ 24ರವರೆಗೂ ಲೌಕ್ ಡೌನ್ ಘೋಷಿಸಿರುವುದರಿಂದ ಮರಣ ಪ್ರಮಾಣ ಹಾಗೂ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಲಾಕ್ ಡೌನ್ ಕ್ರಮವನ್ನು ಪ್ರಶಂಸಿಸಿರುವ ತಜ್ಞರು, ಜೂನ್ ವೇಳೆಗೆ ಒಟ್ಟಾರೇ ಕೋವಿಡ್-19 ಪ್ರಕರಣಗಳ ಸಂಖ್ಯೆ 28 ಲಕ್ಷದಿಂದ 13. 93 ಲಕ್ಷಕ್ಕೆ ತಗ್ಗುವ ನಿರೀಕ್ಷೆಯಿದೆ. ಮರಣ ಪ್ರಮಾಣ ಜೂನ್ 11ರ ವೇಳೆಗೆ ಅಂದಾಜಿಸಲಾಗಿರುವ 26,171 ರಿಂದ 14,220ಕ್ಕೆ ಕಡಿಮೆಯಾಗುವ ಸಾಧ್ಯತೆಯಿರುವುದಾಗಿ ಅಂದಾಜಿಸಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ. ಆದರೆ, ಸಾವಿನ ಪ್ರಮಾಣ ಮುಂದುವರೆಯಲಿದೆ. ಮೇ 17ರಂದು 9,664 ಸಾವಿನ ಪ್ರಕರಣದಿಂದ ಜೂನ್ 11ಕ್ಕೆ 14,220ಕ್ಕೆ ಸಾವಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಐಎಸ್ ಸಿ ವಿಶ್ಲೇಷಿಸಿದೆ.
ಕೋವಿಡ್-19 ಎರಡನೇ ಅಲೆ ಮೇ 17ರಿಂದ ತಗ್ಗಲಿದೆ. ಸಾವಿನ ಸಂಖ್ಯೆ ಮುಂದುವರೆಯಲಿದೆ. ಆದಾಗ್ಯೂ, ಸಕ್ರಿಯ ಪ್ರಕರಣಗಳ ಸಂಖ್ಯೆ ಸೋಂಕು ತಗುಲಿದ ಅನೇಕ ದಿನಗಳ ನಂತರ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಸಾವಿನ ಪ್ರಮಾಣವೂ ತಗ್ಗುವ ಸಾಧ್ಯತೆಯಿದೆ ಎಂದು ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಶಶಿಕುಮಾರ್ ಗಣೇಶನ್ ತಿಳಿಸಿದ್ದಾರೆ.
ಒಂದು ವೇಳೆ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸದಿದ್ದರೆ ಮೇ ಮಧ್ಯಭಾಗದಲ್ಲಿ ರಾಜ್ಯಕ್ಕೆ ದೊಡ್ಡ ರಿಲೀಫ್ ಸಿಗುವ ಸಾಧ್ಯತೆಯಿದೆ. ಗಡಿಗಳನ್ನು ತೆರೆಯುವಾಗ ಸರ್ಕಾರ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಲಾಕ್ ಡೌನ್ ಹಾಗೂ ಸರ್ಕಾರ ನೀಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶಶಿಕುಮಾರ್ ಗಣೇಶನ್ ಮನವಿ ಮಾಡಿಕೊಂಡಿದ್ದಾರೆ.