ಬಿಜೆಪಿ ಸರ್ಕಾರ ಸತ್ತು ಹೋಗಿದ್ದು, ರಾಜ್ಯದಲ್ಲಿ ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿದೆ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದ್ದು, ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಿಕೇಶಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೆಚ್ಚು ರೋಗಿಗಳು ಪತ್ತೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಕೊರೋನಾ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದೆ. ಪರೀಕ್ಷೆ ಹೆಚ್ಚಾದರೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತದೆ ಎಂದ ಮಾಜಿ ಸಿಎಂ, ಜನರು ತಪ್ಪದೇ ಕೋ ವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಯಾವುದಾದರೂ ಒಂದು ಹಾಕಿಸಿಕೊಳ್ಳಿ.‌ ಲಸಿಕೆ ಮಾತ್ರ ಶಾಶ್ವತ ಪರಿಹಾರವಾಗಿದೆ. ಎರಡು ವಾರ ಸಂಪೂರ್ಣವಾಗಿ ಲಾಕ್ಡೌನ್ ಮಾಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ಪ್ರತಿನಿತ್ಯ 50 ಸಾವಿರ ಜನರಿಗೆ ಪಾಸಿಟಿವ್ ಬರ್ತಿದೆ.‌ ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಜನತೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ನಿಮ್ಮ ರಕ್ಷಣೆ ಜತೆಗೆ ಬೇರೆಯವರ ರಕ್ಷಣೆ ಸಹ ಮಾಡಬೇಕೆಂದು ಮನವಿ ಮಾಡಿದರು.

ಸರ್ಕಾರ ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು. ಈಗ ವ್ಯಾಕ್ಸಿನ್ ಕೊರತೆ ಆಗಿದೆ. ಜನ ಆಕ್ಸಿಜನ್ ಕೊರತೆಯಿಂದ ಸಾಯುತ್ತಿದ್ದಾರೆ. ಆಕ್ಸಿಜನ್ ಸಕಾಲದಲ್ಲಿ ಸಿಕ್ಕರೆ ಬದುಕಿಸಬಹುದು. ಆಕ್ಸಿಜನ್ ಇಲ್ಲದೇ ದಾರಿಯಲ್ಲಿ ಬರುವಾಗ,ಆಸ್ಪತ್ರೆ ಕಾರಿಡರ್, ರಸ್ತೆ,ಅಂಬುಲೆನ್ಸ್, ಆಟೋದಲ್ಲಿ ಸತ್ತು ಹೋದ್ರು ಅನ್ನೋ ಸುದ್ದಿ ಬರುತ್ತಿವೆ. ಸೋಂಕು ನಿಯಂತ್ರಣ ಹಾಗು ಸೋಂಕಿತರ ರಕ್ಷಣೆಗೆ ಸರ್ಕಾರ ಯಾವುದೇ ತಯಾರಿ ಮಾಡಿಕೊಂಡಿಲ್ಲ.

ಆಕ್ಸಿಜನ್ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್ ಹೇಳಿದರೂ ಸಹ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚುವರಿ ಆಕ್ಸಿಜನ್ ಕೊಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗಿದ್ದನ್ನು ಪೂರ್ಣವಾಗಿ ಬಳಸಿಕೊಳ್ಳಿ ಎಂದು ಕೇಂದ್ರ ಹೇಳಬೇಕಿತ್ತು. ಆದರೆ ಕೇಂದ್ರಕ್ಕೆ ಬದ್ಧತೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ ಈಗಾಗಲೇ ಬಡವರಿಗೆ ಅಕ್ಕಿ ಪ್ರಮಾಣ ಕಡಿಮೆ ಮಾಡಿರುವ ಸರ್ಕಾರ ಇದೀಗ ಮಣ್ಣು ಕಲ್ಲು ಇರುವ ರಾಗಿ ಕೊಡುತ್ತಿದೆ. ಇದೆಲ್ಲವನ್ನು ಬಿಟ್ಟು ಬಡವರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕು. ಉತ್ಪಾದಕರನ್ನ ಉಳಿಸಿಕೊಳ್ಳಲು ಸರ್ಕಾರ ಅವರ ಕೈಗೆ ಹಣ ಕೊಡಬೇಕು..‌ಆರ್ಥಿಕ ಸಹಾಯ ಮಾಡಬೇಕು ಎಂದರು.

ಆಂದ್ರಪ್ರದೇಶ, ಕೇರಳದಲ್ಲಿ ಪ್ಯಾಕೇಜ್ ಕೊಟ್ಟಿದ್ದಾರೆ. ಇಲ್ಲೂ ಸಹ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ. ಆದರೆ, ಈ ಸರ್ಕಾರದಲ್ಲಿ ಬದ್ಧತೆ ಕಾಣುತ್ತಿಲ್ಲ ದುಡಿಯುವ ವರ್ಗಕ್ಕೆ ಏನು ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು‌.

ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸಾಧ್ಯವಾದಷ್ಟು ಅವರವರ ಕ್ಷೇತ್ರದಲ್ಲಿ ಜನರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದು, ಕೆಲವರು ಆಸ್ಪತ್ರೆ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಇನ್ನು ಕೆಲವರು ಆಹಾರ ಧಾನ್ಯ, ಆಸ್ಪತ್ರೆ ವ್ಯವಸ್ಥೆ ಮಾಡುತ್ತಿದ್ದಾರೆ. ಕೊರೋನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಸಹಕಾರ ಇರುತ್ತದೆ‌. ಆದರೆ ಆಸ್ಪತ್ರೆ, ಅಂಬುಲೆನ್ಸ್, ಆಕ್ಸಿಜನ್ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸರ್ಕಾರವನ್ನು ಸಿದ್ದರಾಮಯ್ಯ ಕುಟುಕಿದರು.

ಲಾಕ್ ಡೌನ್ ಅವಧಿಯಲ್ಲಿ ದುಡಿಯುವ ವರ್ಗ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಬಡವರು ಎಲ್ಲಿ ಹೋಗಬೇಕು. ಕೂಲಿ ಕಾರ್ಮಿಕರು,ಆಟೋ ರಿಕ್ಷಾ ಓಡಿಸುವವರ ಕಷ್ಟವನ್ನು ಅರಿತು ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸುವುದಾಗಿ ಸಿದ್ದರಾಮಯ್ಯ ಹೇಳಿದರು.

ಕೇಂದ್ರದಿಂದ ಬರುತ್ತಿರುವ ವೆಂಟಿಲೇಟರ್ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊರೋನಾ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಸತ್ತ ಸರ್ಕಾರ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗಿದೆ. ಕೇಂದ್ರ ಸರ್ಕಾರ ವಿಫಲವಾದ ಬಳಿಕ ಕೋರ್ಟ್ ಮಧ್ಯೆ ಪ್ರವೇಶ ಆಗಿದೆ. ಇದರ ಅರ್ಥ ಸರ್ಕಾರ ಸತ್ತು ಹೋಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!