ಮನಮೋಹನ್ ಸಿಂಗ್ ಅವರದ್ದು ಕೇವಲ ಬಾಯಿಮಾತು: ಜೆಪಿ ನಡ್ಡಾ
ನವದೆಹಲಿ: ಪೂರ್ವ ಲಡಾಕ್ ಸಂಘರ್ಷದ ಬಗ್ಗೆ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಕೇವಲ ಬಾಯಿಮಾತು ಎಂದು ಟೀಕಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಗಳನ್ನು ಯಾವ ಭಾರತೀಯರು ಒಪ್ಪಲು ಸಾಧ್ಯವಿಲ್ಲ. ಭಾರತ ದೇಶದ ಜನರಿಗೆ ಪ್ರಧಾನಿ ಮೋದಿ ಮೇಲೆ ಸಂಪೂರ್ಣ ನಂಬಿಕೆಯಿದೆ. ಅತಿ ಕಠಿಣ ಪರೀಕ್ಷಾ ಸಮಯದಲ್ಲಿ ಪ್ರಧಾನಿ ಮೋದಿಯವರ ಆಡಳಿತ ಅನುಭವಗಳನ್ನು ಈ ದೇಶದ 130 ಕೋಟಿ ಜನರು ನೋಡಿದ್ದಾರೆ. ಬೇರೆಲ್ಲಕ್ಕಿಂತ ದೇಶದ ಹಿತಾಸಕ್ತಿ ಮುಖ್ಯ ಎಂಬ ಬಗ್ಗೆ ಮೋದಿಯವರು ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುದು ಸಹ ಜನರಿಗೆ ಗೊತ್ತಿದೆ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 43 ಸಾವಿರ ಕಿಲೋ ಮೀಟರ್ ಗೂ ಅಧಿಕ ಭೂ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದರು. ಯುಪಿಎ ಆಡಳಿತದ ಸಮಯದಲ್ಲಿ, ಭಾರತೀಯ ಸೇನೆಗೆ ಶಕ್ತಿ ತುಂಬದೆ ಯುದ್ಧ ಮಾಡದೆ ಚೀನಾದ ಮುಂದೆ ಭಾರತ ಶರಣಾಗಿತ್ತು. 2010ರಿಂದ 2013ರ ನಡುವೆ ಚೀನಾದಿಂದ 600ಕ್ಕೂ ಹೆಚ್ಚು ಬಾರಿ ಭಾರತದ ಮೇಲೆ ಆಕ್ರಮಣವಾಗಿತ್ತು, ಆಗ ಏಕೆ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನವರು ಸುಮ್ಮನೆ ಇದ್ದರು, ಚೀನಾವನ್ನು ಧೈರ್ಯವಾಗಿ ಸದೆಬಡಿಯಬಹುದಾಗಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿಯನ್ನು, ಪ್ರಧಾನ ಮಂತ್ರಿ ಕಚೇರಿಯನ್ನು ಸರ್ಕಾರವನ್ನು ಟೀಕಿಸುವ ವಿಷಯದಲ್ಲಿ ನಮ್ಮ ಸೈನಿಕರ ಧೈರ್ಯ, ಸಾಹಸಗಳನ್ನು ಪ್ರಶ್ನೆ ಮಾಡುತ್ತಿದ್ದೀರಿ, ನಮ್ಮ ಸೇನಾಪಡೆಗೆ ಅವಮಾನ ಮಾಡುತ್ತಿದ್ದೀರಿ, ಅಂದು ಸರ್ಜಿಕಲ್ ಸ್ಟ್ರೈಕ್ ಆದಾಗಲೂ ಕಾಂಗ್ರೆಸ್ ನವರು ಇದೇ ರೀತಿ ಮಾಡಿದ್ದರು ಎಂದು ನಡ್ಡಾ ಕಿಡಿಕಾರಿದ್ದಾರೆ.