ಗಾಲ್ವನ್: ಗಡಿಯುದ್ದಕ್ಕೂ ಸೇನಾಪಡೆ ನಿಯೋಜನೆ, ಉದ್ವಿಗ್ನ ಪರಿಸ್ಥಿತಿ
ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಜೂನ್ 15ರ ರಾತ್ರಿ ನಡೆದ ಸಂಘರ್ಷದ ಬಳಿಕ ಇದೀಗ ಭಾರತ ಮತ್ತು ಚೀನಾ ಸೇನಾಪಡೆಗಳು 3,488 ಕಿ.ಮೀ. ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ನಿಯೋಜನೆಗೊಂಡಿವೆ. ಹೀಗಾಗಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ವಾಯು ಮತ್ತು ನೌಕಾನೆಲೆಗಳನ್ನೂ ಸಜ್ಜುಗೊಳಿಸಲಾಗಿದೆ.
ಗಾಲ್ವನ್ ಪ್ರಕರಣದ ಬಳಿಕ ಸೇನಾಪಡೆಗಳ ನಡುವೆ ಸಂಘರ್ಷ ನಡೆದಿಲ್ಲವಾದರೂ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ತನ್ನ ಆಕ್ರಮಣಕಾರಿ ನಡೆಯುನ್ನು ಮುಂದುವರಿಸಿವೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಚೀನಾ ನಡೆಗೆ ಪ್ರತಿಯಾಗಿ ಭಾರತ ಸೇನಾಪಡೆಗಳಿಗೂ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ದಾಳಿ ನಡೆಸಿದರೆ ತಕ್ಕ ಉತ್ತರ ನೀಡುವಂತೆ ಸೂಚಿಸಲಾಗಿದೆ. ಗಡಿಯುದ್ದಕ್ಕೂ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದೆ.
ಗಾಲ್ವನ್ ಸಂಘರ್ಷದ ಬಳಿಕ ಗಡಿಯಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಜೂನ್ 6ರಂದು ನಡೆಸಿದ್ದ ಮಾತುಕತೆಯಂತೆ ಉಭಯ ಸೈನ್ಯಗಳು ಸೇನಾ ಪಡೆಗಳನ್ನು ಹಿಂಪಡೆಯುವ ಬಗ್ಗೆ ಯೋಚಿಸುತ್ತಿಲ್ಲ. ಸೇನೆಯ ಹಿರಿಯ ಅಧಿಕಾರಿಗಳು ಅಕ್ಸಾಯ್ ಚಿನ್ ಪ್ರದೇಶದಲ್ಲಿ ಪಿಎಲ್‌ಎನ ಮುಂದಿನ ನಡೆಯನ್ನು ಅವಲೋಕಿಸುತ್ತಿದ್ದಾರೆ. ಇದೇ ವೇಳೆ ವಿದೇಶಾಂಗ ಸಚಿವಾಲಯವು ರಾಜತಾಂತ್ರಿಕ ಪರಿಹಾರ ಹುಡುಕುವ ಪ್ರಯತ್ನ ನಡೆಸುತ್ತಿದೆ. ಈ ಕುರಿತು ಮಾತನಾಡಿರುವ ರಾಜತಾಂತ್ರಿಕ ಅಧಿಕಾರಿಯೊಬ್ಬರು, ‘ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಶಾಂತವಾದಂತಿದೆ. ಆದರೆ, ಗಾಲ್ವನ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ನಿರ್ಧಾರದಿಂದ ಪರಿಸ್ಥಿತಿ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ’ ಎಂದು ತಿಳಿಸಿದ್ದಾರೆ.
ಸದ್ಯ ದೇಶದಲ್ಲಿ ಪ್ರತೀಕಾರದ ಕೂಗು ಎದ್ದಿದೆ ಎಂದು ಹೇಳಿರುವ ಸೇನೆಯ ಮಾಜಿ ಮುಖ್ಯಸ್ಥರೊಬ್ಬರು, ‘ಸೇಡಿಗಾಗಿ ಆಗ್ರಹಿಸುತ್ತಿರುವವರು ಎರಡು ನ್ಯೂಕ್ಲಿಯರ್ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಿದರೆ ಆಗುವ ಪರಿಣಾಮಗಳ ಕಲ್ಪನೆಯನ್ನೂ ಹೊಂದಿಲ್ಲ. ಒಂದು ವೇಳೆ ಭಾರತ ಅಥವಾ ಚೀನಾ ಸೇನೆ ಎಲ್‌ಎಸಿ ಸಂಬಂಧ 1996/2005ರ ಮಿಲಿಟರಿ ಪ್ರೊಟೋಕಾಲ್ ಅನ್ನು ಪಾಲಿಸದಿದ್ದರೆ, ಗಡಿಯುದ್ದಕ್ಕೂ ಉದ್ವಿಗ್ನತೆ ಉಲ್ಬಣಿಸುವ ಸಾಧ್ಯತೆ ಇತ್ತು’ ಎಂದು ಹೇಳಿದ್ದಾರೆ