ಉಡುಪಿ ಜಮಾಅತೆ ಇಸ್ಲಾಮಿ ಹಿಂದ್: ಜಿಲ್ಲೆಯ 2500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲೆಯ ವತಿಯಿಂದ ಮುಸ್ಲಿಮರ ಪವಿತ್ರ ಮಾಸ ರಂಝಾನ್ ಪ್ರಯುಕ್ತ ಲಾಕ್’ಡೌನ್ ನ ಹಿನ್ನಲೆಯಲ್ಲಿ ಸಂಕಷ್ಟದಲ್ಲಿದ್ದ ಸುಮಾರು ಎರಡು ಸಾವಿರಕ್ಕಿಂತ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ನೀಡಿ ನೆರವಾಗಿದೆ. 

ಉಡುಪಿ ಜಿಲ್ಲೆಯ ಕುಂದಾಪುರ,ಬ್ರಹ್ಮಾವರ, ಕಾಪು, ಕಾರ್ಕಳ, ಉಡುಪಿ ತಾಲೂಕಿನ ಬಡ ಕುಟುಂಬಕ್ಕೆ ಈ ರೇಷನ್ ಕಿಟ್ ಗಳನ್ನು ತಲುಪಿಸಲಾಗಿದೆ.

ಈ ಸಂಬಂಧ ಮಾಹಿತಿ ನೀಡಿರುವ ಜೆ.ಐ.ಎಚ್ ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ಸಂಕಷ್ಟದ ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸುವುದು ಇಸ್ಲಾಮ್ ಕಲಿಸಿಕೊಟ್ಟ ಆದರ್ಶ. ಆ ಹಿನ್ನಲೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬಹಳಷ್ಟು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸೂರಿಲ್ಲದವರಿಗೆ ಸೂರು ಒದಗಿಸುವ ಕಾರ್ಯ, ಸ್ವಯಂ ಉದ್ಯೋಗಕ್ಕೆ ಸಹಾಯ ಹೀಗೆ ನಿರಂತರವಾಗಿ ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುತ್ತ ಬಂದಿದೆ.ಇದರ ಅಂಗ ಸಂಸ್ಥೆ ಎಚ್.ಆರ್.ಎಸ್ ಈಗಿನ ಕೋವಿಡ್ ತುರ್ತು ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. 

ಲಾಕ್’ಡೌನ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂಕಷ್ಟಕ್ಕೀಡಾಗಿರುವ 2500 ಕ್ಕಿಂತ ಅಧಿಕ ಕುಟುಂಬಗಳಿಗೆ ನಾವು ರೇಷನ್ ಕಿಟ್ ವಿತರಿಸಿದ್ದೇವೆ. ಜಾತಿ,ಮತ,ಧರ್ಮದ ಬೇಧ ಮಾಡದೆ ಎಲ್ಲರಿಗೂ ವಿತರಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ನಡೆಸಿಕೊಟ್ಟಿದ್ದಾರೆಂದು ಹೇಳಿದ್ದಾರೆ. 

ಜಮಾಅತೆ ಇಸ್ಲಾಮಿ ಹಿಂದ್’ನ ಎಚ್.ಆರ್.ಎಸ್ ಘಟಕವು ಕೋವಿಡ್ ರಿಲೀಫ್ ಕಾರ್ಯದಲ್ಲಿ ಜಿಲ್ಲೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು ರೋಗಿಗಳಿಗೆ ಬೇಕಾದ ಎಲ್ಲ ಸಹಾಯ ಹಸ್ತ ಚಾಚಲು ತನ್ನಿಂದಾದ ಪ್ರಯತ್ನ ಮಾಡುತ್ತಿದೆ. ಆಯುಷ್ಮಾನ್ ಮಾರ್ಗದರ್ಶಿ, ಅಂಬ್ಯುಲೆನ್ಸ್ ಸೇವೆ, ಡಾಕ್ಟರ್ ಸೇವೆ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ಇದರ ವಿದ್ಯಾರ್ಥಿ ಘಟಕ ಎಸ್.ಐ.ಓ ಕೋವಿಡ್ ಸಂಬಂಧಿತ ಸಂಪೂರ್ಣವಾದ ಸುಸಜ್ಜಿತವಾದ ಸಹಾಯ ಕೇಂದ್ರ ಸ್ಥಾಪಿಸಿ ದೇಶದಾದ್ಯಂತ ಸುದ್ದಿಯಾಗಿತ್ತು. 
ಎಚ್.ಆರ್.ಎಸ್ ಕಾರ್ಯಕರ್ತರು ಜಾತಿ, ಮತದ ಬೇಧವಿಲ್ಲದೆ ಸೋಂಕಿತ ವ್ಯಕ್ತಿ ಮೃತಪಟ್ಟಾಗ ಅವರ ಅಂತ್ಯಕ್ರಿಯೆ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. 

ಈ ಕುರಿತು ಪ್ರತಿಕ್ರಯಿಸಿರುವ ಎಚ್.ಆರ್.ಎಸ್ ಸಂಚಾಲಕ ಹಸನ್, ‘ ಕಳೆದ ಬಾರಿಯ ಲಾಕ್’ಡೌನ್ ನಂತೆ ಈ ಬಾರಿಯು ನಮ್ಮ ಕಾರ್ಯಕರ್ತರು ಜನರಿಗೆ ಸಹಾಯ ನೀಡಲು ದಿನ ರಾತ್ರಿ ಎನ್ನದೆ ಸೇವೆಯಲ್ಲಿ ನಿರತರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಸ್ಥಾಪಿಸಲಾಗಿದೆ. ಈಗಾಗಲೇ ನೂರಾರು ಮಂದಿ ಕರೆ ಮಾಡಿ ಸಹಾಯ ಕೋರಿದ್ದಾರೆ. ನಮ್ಮ ತಂಡ ಅವರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದೆ. ಬೆಡ್, ಆಕ್ಸಿಜನ್, ವೆಂಟಿಲೇಟರ್ ನ ಅಗತ್ಯವಿದ್ದಾಗ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಅದನ್ನು ಒದಗಿಸಿ ಕೊಡುವ ಪ್ರಯತ್ನ ಮಾಡಲಾಗುತ್ತಿದೆ. 

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಜಾತಿ ಮತ ಬೇಧಯಿಲ್ಲದೆ ಸಾವಿರಾರು ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಕೋವಿಡ್ ಸೋಂಕಿತರು ಮೃತಪಟ್ಟ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಅತ್ಯಂತ ಗೌರವಯುತವಾಗಿ ಅವರ ಅಂತ್ಯ ಸಂಸ್ಕಾರ ನಡೆಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!