ಸಂಸದ ತೇಜಸ್ವಿ ಸೂರ್ಯ ಕ್ಷಮೆ ಕೇಳಿರುವ ವಿಚಾರಕ್ಕೆ ತಮ್ಮ ಬಳಿ ದಾಖಲೆ ಇದೆ- ದಿ ನ್ಯೂಸ್ ಮಿನಿಟ್ ಡಾಟ್ ಕಾಂ

ಬೆಂಗಳೂರು, ಮೇ 7: ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿ 16 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರು ಕೇಳಿ ಬಂದಿರುವ ವಿಚಾರಕ್ಕೆ ಅನೇಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಈ ವಿಚಾರವಾಗಿ‌ ಬಿಬಿಎಂಪಿ
ವಾರ್ ರೂಮ್ ಗೆ ತೆರಳಿ ಸಂಸದ ತೇಜಸ್ವಿ ಸೂರ್ಯ ಅವರು ಕ್ಷಮೆ ಕೇಳಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ಡಾಟ್ ಕಾಂ ವರದಿ ಮಾಡಿತ್ತು.  ಆದರೆ ತಾನು ಕ್ಷಮೆ ಹೇಳಿರುವ ಸುದ್ದಿಯನ್ನು ಸಂಸದ ತೇಜಸ್ವಿ ಸೂರ್ಯ ನಿರಾಕರಿಸಿದ್ದರು. ಅಲ್ಲದೆ  ಇದು ಸುಳ್ಳು ಸುದ್ದಿ’ಎಂದು ಟ್ವೀಟ್ ಮಾಡಿದ್ದರು.

ಇದೀಗ ಈ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿರುವ ದಿ ನ್ಯೂಸ್ ಮಿನಿಟ್ ಡಾಟ್ಕಾಂನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಸಂಸದರು ಕ್ಷಮೆ ಕೇಳಿರುವ ವಿಚಾರಕ್ಕೆ ಸಂಬಂಧಿಸಿ ತಮ್ಮ ಬಳಿ ದಾಖಲೆಗಳು ಇರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದಿ ನ್ಯೂಸ್ ಮಿನಿಟ್ ಡಾಟ್ ಕಾಂನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು, ಯಾವುದು ಸುಳ್ಳು ಸುದ್ದಿ? ನೀವು ಅಲ್ಲಿಗೆ (ಬಿಬಿಎಂಪಿ ವಾರ್ ರೂಂ) ಹೋಗಿದ್ದೀರಿ. ನಂಬರ್ ಗಳು ಸೋರಿಕೆಯಾದ ಬಗ್ಗೆ ಹಾಗೂ ಕಿರುಕುಳ ನೀಡಿರುವ ಬಗ್ಗೆ ನೀವು ಕ್ಷಮಿಸಿ ಎಂದಿದ್ದೀರಿ. ತನಗೆ ನೀಡಲಾದ ಪಟ್ಟಿಯನ್ನು ಓದಿದ್ದೇನೆ ಎಂದು ನೀವು ತಿಳಿಸಿದ್ದೀರಿ.

ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬುದನ್ನೂ ಹೇಳಿದ್ದೀರಿ. ನನಗೆ ಹೇಗೆ ಗೊತ್ತು? ನನ್ನ ಬಳಿ ಆಡಿಯೋ ಇದೆ” ಎಂದು ತಿರುಗೇಟು ನೀಡಿದ್ದಾರೆ.ಆದರೆ ನ್ಯೂಸ್ ಮಿನಿಟ್ ವರದಿಯಲ್ಲಿ ಒಂದು ಸಮಸ್ಯೆ ಇದೆ. ತೇಜಸ್ವಿ ಸೂರ್ಯ ತಾನು ‘ಕೋಮುವಾದಿ ಅಥವಾ ಜಾತಿವಾದಿ’ ಅಲ್ಲ ಎಂದು ಹೇಳಿದ್ದಾರೆಂದು ನಾವು ವರದಿ ಮಾಡಿದ್ದೆವು. ಆದರೆ 15 ನಿಮಿಷದ ಆಡಿಯೋದಲ್ಲಿ ಅದು ಇಲ್ಲ. ಬಹುಷ ಅದು ನಮಗೆ ಸಿಗದ ಭಾಷಣದಲ್ಲಿ ಇರಬಹುದು. ಅದಾಗ್ಯೂ ನೀವು ಅದನ್ನು ಹೇಳಿಲ್ಲದಿದ್ದರೆ ನಾವು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಅವರು 16 ಮುಸ್ಲಿಂ ಸಿಬ್ಬಂದಿ ಜೊತೆ ಮಾತನಾಡಿಲ್ಲ ಮತ್ತು ಅವರೊಂದಿಗೆ ಕ್ಷಮೆ ಕೇಳಿಲ್ಲ ಎಂದು ನಿಮ್ಮ ಕಚೇರಿ ನಮ್ಮ ವರದಿಗಾರನಿಗೆ ತಿಳಿಸಿದೆ. ಅದನ್ನೇ ನಾವು ನಮ್ಮ ವರದಿಯಲ್ಲಿ ಹೇಳಿದ್ದೇವೆ. ಧನ್ಯವಾದಗಳು. ನನ್ನ ನಂಬರ್ ಕೂಡಾ ಸೋರಿಕೆ ಆಗಿದೆ ಮತ್ತು ನನ್ನ ಹೆತ್ತವರನ್ನು ನಿಂದಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ವಾರ್ ರೂಂಗೆ ತಿಳಿಸಿದ್ದಾರೆ. ಎಲ್ಲರೂ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕೊರೋನ ಸಾಂಕ್ರಾಮಿಕದ ಕಡೆ ಗಮನಹರಿಸಬೇಕು. ನಾವು ಎಲ್ಲಾ ಹೇಳಿಕೆಗಳನ್ನು ನಮ್ಮ ಸುದ್ದಿಯಲ್ಲಿ ಅಪ್ಡೇಟ್ ಮಾಡುತ್ತೇವೆ. ಇನ್ನು ಮುಂದೆ ಈ ಬಗ್ಗೆ ಟ್ವೀಟ್ ಮಾಡುವುದಿಲ್ಲ. ನಮಗೆ ಮಾಡಲು ಬೇರೆ ಕೆಲಸಗಳಿವೆ ಎಂದು ಧನ್ಯಾ ರಾಜೇಂದ್ರನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!