| ಉಡುಪಿ ಮೇ.7(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ವ ಪಕ್ಷ ಸಭೆ ಕರೆದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿಪ್ರಾಯ ಪಡೆದು ಸಮಸ್ಯೆಯನ್ನು ಬಗೆಹರಿಸಬೇಕಾಗಿ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಬಳಿ ಮನವಿ ಮಾಡಲಾಗಿದೆ. ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, ಜಿಲ್ಲಾಡಳಿತ ಜನತೆಗೆ ನೀಡುವ ಮುನ್ನೆಚ್ಚರಿಕೆ ಹಾಗೂ ಜಾಗ್ರತಿ ಕಾರ್ಯಕ್ರಮಗಳು ಶ್ಲಾಘನೀಯವಾದರೂ ದಿನೇ ದಿನೇ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಳ ವಾಗುತ್ತಿರುವುದರಿಂದ ದೇಶದಲ್ಲಿ ರಾಷ್ಟ್ರೀಯ ವಿಪತ್ತು ಹಾಗೂ ಸಾಂಕ್ರಾಮಿಕ ರೋಗಗಳು ಬಂದಾಗ ಜನಜಾಗ್ರತಿ ಮತ್ತು ರಕ್ಷಣೆ, ವೈದ್ಯಕೀಯ ನೆರವು ಆಹಾರದ ವ್ಯವಸ್ಥೆಗಳು ನೀಡಬೇಕಾಗಿರುವುದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನ ಕರ್ತವ್ಯ ಕೂಡಾ ಆಗಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೋವಿಡ್ ಪ್ರಥಮ ಅಲೆ ಬಂದಾಗ, ಹಾಗೂ ಈಗ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗಲೂ ಆಡಳಿತ ಪಕ್ಷ ಹಾಗೂ ಜನ ಪ್ರತಿನಿಧಿಗಳನ್ನು ಹೊರತು ಪಡಿಸಿ ಸರ್ವ ಪಕ್ಷಗಳ ಮುಖಂಡರ ಸಭೆ ಕರೆಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಕೂಡಲೇ ಕಾಂಗ್ರೆಸ್, ಜೆ.ಡಿ.ಎಸ್. ಕಮ್ಯೂನಿಸ್ಟ್ ಪಕ್ಷಗಳ ಮುಖಂಡರನ್ನೊಳಗೊಂಡ ಸರ್ವ ಪಕ್ಷ ಸಭೆ ಕರೆದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿಪ್ರಾಯ ಪಡೆದು ಸಮಸ್ಯೆಯನ್ನು ಬಗೆಹರಿಸಬೇಕಾಗಿ ಜಿಲ್ಲಾಧಿಕಾರಿ ಯವರನ್ನು ವಿನಂತಿಸಿದರು. ಕಾಪು ತಾಲೂಕಿನಲ್ಲಿರುವ ಸರಕಾರಿ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತ ಮಟ್ಟಕ್ಕೆ ಏರಿಸುವ ಬಗ್ಗೆ ಹಾಗೂ ಅವಶ್ಯವಿರುವ ವೈದ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ಕೂಡಲೇ ನೇಮಿಸುವಂತೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ ತೆಂಕ ಎರ್ಮಾಳಿನಲ್ಲಿರುವ ರಾಜೀವ್ ಗಾಂಧಿ ಪೊಲಿಟಿಕಲ್ ಎಕಾಡಮಿಯ ಕಟ್ಟಡದಲ್ಲಿ ಕೋವಿಡ್ ಸೋಂಕು ಪೀಡಿತರ ಶುಶ್ರೂಷೆಗೆ ಉಚಿತವಾಗಿ ಅವಕಾಶ ನೀಡುವುದಾಗಿ ಹೇಳಿದರು ಹಾಗೂ ವ್ಯಾಕ್ಸಿನ್‌ನ ಲಭ್ಯತೆ ಬಗ್ಗೆ ಇರುವ ಗೊಂದಲವನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಅಲ್ಲದೆ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ 19 ಸೋಂಕು ಪೀಡಿತರ ಆಕ್ಸಿಜನ್ ಸ್ಯಾಚುರೇಶನ್ ಪರೀಕ್ಷಿಸುವ ಸಾಧನ ಆಕ್ಸಿಮೀಟರ್ ಅನ್ನು ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಗಫೂರ್, ಕೆ.ಪಿ.ಸಿ.ಸಿ. ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಡಾ. ಸುನೀತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಮೊದಲಾದವರು ಉಪಸ್ಥಿತರಿದ್ದರು. | |