ಹೊರ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್: ಸುಧಾಕರ್

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದ್ದು, ಇಲ್ಲಿ ಚೇತರಿಕೆ ಪ್ರಮಾಣ ಶೇ.61.39ರಷ್ಟಿದೆ. ಅಂತೆಯೇ ಮರಣ ಪ್ರಮಾಣ ಶೇ.1.49ರಷ್ಟಿದೆ. ಎಲ್ಲ ಸೋಂಕಿತರನ್ನು ಮತ್ತು ಅವರ ಸಂಪರ್ಕಿತರನ್ನು ಹುಡುಕುವ ಮತ್ತು ಚಿಕಿತ್ಸೆ ನೀಡುವ ಕಾರ್ಯವನ್ನು ಸರ್ಕಾರ ಯಶಸ್ವಿಯಾಗಿ ಮಾಡುತ್ತಿದೆ. ಅಂತೆಯೇ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ಕರ್ನಾಟಕದಲ್ಲಿ 453 ಪಾಸಿಟಿವ್ ಪ್ರಕರಣ ದಾಖಲಾಗಿ ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರಿಯೊಂದರಲ್ಲೇ ನಿನ್ನೆ 196 ಮಂದಿಗೆ ಕೊರೋನಾ ಸೋಂಕು ಒಕ್ಕರಿಸಿದೆ. ಹೊರ ರಾಜ್ಯಗಳಿಂದ ಬಂದವರ ಪೈಕಿ ಬಹುತೇಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!