ಉಡುಪಿ ಜಿಲ್ಲಾ ಯುವ ಕಾಂಗ್ರೆಸ್: ಆಂಬುಲೆನ್ಸ್ ಹಾಗೂ ವೈದ್ಯಕೀಯ ತುರ್ತು ಸೇವಾ ವಾಹನಕ್ಕೆ ಚಾಲನೆ
ಉಡುಪಿ: ಕೋವಿಡ್ ಸೋಂಕು ಪೀಡಿತರಿಗೆ ಅನುಕೂಲವಾಗುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ಆಂಬುಲೆನ್ಸ್ ಸೇವೆ ಹಾಗೂ ವೈದ್ಯಕೀಯ ತುರ್ತು ಸೇವಾ ವಾಹನಗಳ ಚಾಲನೆ ದೊರೆಯಿತು. ಜಿಲ್ಲಾ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಒಂದು ಅಂಬುಲೆನ್ಸ್ ಹಾಗೂ 8 ವೈದ್ಯಕೀಯ ತುರ್ತು ವಾಹನಗಳಿಗೆ ಚಾಲನೆ ನೀಡಲಾಯಿತು.
ಜಿಲ್ಲೆಯ ಯಾವುದೇ ಆರೋಗ್ಯ ಕೇಂದ್ರಗಳಿಂದ ತುರ್ತಾಗಿ ಕೋವಿಡ್ಗೆ ಸಂಬಂಧಿಸಿದವರನ್ನು ಕರೆ ತರಲು,ದಾಖಲಿಸಲು, ತುರ್ತು ಚಿಕಿತ್ಸೆ ಅಥವಾ ಸಿ.ಟಿ ಸ್ಕ್ಯಾನಿಂಗ್ಗಾಗಿ ದೂರದ ಆಸ್ಪತ್ರೆಗೆ ಹೋಗಬೇಕಾದವರಿಗೆ ಮತ್ತು ಕೋವಿಡ್ ನಿಂದ ಮೃತ ಹೊಂದಿದವರಿಗೆ ಇದನ್ನು ಉಚಿತವಾಗಿ ನೀಡಲಾಗುವುದು ಎಂದು ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ನಿರ್ನಾಮಕ್ಕೆ ಸರಕಾರದೊಂದಿಗೆ ಜಿಲ್ಲಾ ಕಾಂಗ್ರೆಸ್ ಪಣತೊಟ್ಟಿದೆ. ಸೋಂಕು ತಡೆಗಟ್ಟಲು ಸರಕಾರ 15 ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಜಿಲ್ಲಾ ಕಾಂಗ್ರೆಸ್ನಿಂದ ಕ್ಷೇತ್ರವಾರು ಸಹಾಯವಾಣಿ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದರು
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಆರಂಭಿಸಿರುವ ಸಹಾಯವಾಣಿ ಅಗತ್ಯವುಳ್ಳವರಿಗೆ ಆಸರೆಯಾಗಿದೆ. ಅದರಂತೆ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ, ಸಲಹೆ ಸೂಚನೆಯಂತೆ ವಿಧಾನಸಭಾ ಕ್ಷೇತ್ರವಾರು ಸಹಾಯವಾಣಿ ಆರಂಭಿಸಲಾಗಿದೆ ಎಂದರು.ಜಿಲ್ಲೆಯ ಪ್ರತಿ ಭಾಗದಲ್ಲಿ ನಾಲ್ವರು ಸಕ್ರಿಯ ಕಾರ್ಯಕರ್ತರು ಸ್ವಯಂ ಸೇವಕರಾಗಿದ್ದಾರೆ. ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ಔಷಧಿ ತಲುಪಿಸಲಾಗುತ್ತದೆ. ಆಸ್ಪತ್ರೆಗೆ ತೆರಳುವವರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತದೆ.
ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದೊಂದಿಗೆ ಕಾಂಗ್ರೆಸ್ ಪಕ್ಷವೂ ಕೈಜೋಡಿಸಿದೆ. ಆಂಬ್ಯುಲೆನ್ಸ್ ಸೇವೆ, ಸಂತ್ರಸ್ತರಿಗೆ ಊಟ, ಔಷಧೋಪಚಾರ ನೀಡುವುದರೊಂದಿಗೆ ಜನರ ಸೇವೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.