ಪಾಕ್ನಿಂದ ಶೆಲ್ ಹಾಗೂ ಗುಂಡಿನ ದಾಳಿ: ಯೋಧ ಹುತಾತ್ಮ
ಜಮ್ಮು: ಪಾಕಿಸ್ತಾನದ ಪಡೆಗಳು ನಡೆಸಿದ ಶೆಲ್ ಹಾಗೂ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿ ರೇಖೆಯಲ್ಲಿ ಭಾರತೀಯ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ.
ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ, ರಜೌರಿಯ ನೌಶೆರಾ ಸೆಕ್ಟರ್ ಹಾಗೂ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಗುಂಡಿನ ಮೊರೆತ ಕೇಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಶೆರಾ ಸೆಕ್ಟರ್ನಲ್ಲಿ ಗಸ್ತು ತಿರುಗುತ್ತಿದ್ದ ಯೋಧನ ಮೇಲೆ ಶೆಲ್ ದಾಳಿ ನಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ.
ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಹೀರಾನಗರ ಸೆಕ್ಟರ್ನ ಕರೊಲ್ ಮತ್ರೈ ಎಂಬ ಪ್ರದೇಶಕ್ಕೊಳಪಟ್ಟ ಗ್ರಾಮಗಳು ಹಾಗೂ ಗಡಿಠಾಣೆಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆದಿದೆ. ಮಧ್ಯರಾತ್ರಿ 1 ಗಂಟೆಯ ವೇಳೆ ಪಾಕ್ ಪಡೆಗಳಿಂದ ಎದುರಾದ ಅಪ್ರಚೋದಿತ ದಾಳಿಗೆ ಬಿಎಸ್ಎಫ್ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಬೆಳಗಿನ ಜಾವ 3.50ರವರೆಗೂ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಯಿಂದ ಈ ತಿಂಗಳಲ್ಲಿ ಒಟ್ಟು ನಾಲ್ವರು ಯೋಧರು ಮೃತಪಟ್ಟಿದ್ದಾರೆ. ರಜೌರಿಯಲ್ಲಿ ಜೂನ್ 4 ಹಾಗೂ 10ರಂದು ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಪೂಂಚ್ನಲ್ಲಿ ಜೂನ್ 14ರಂದು ನಡೆದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಯೋಧ ಮೃತಪಟ್ಟಿದ್ದರು.
ಜೂನ್ 10ರವರೆಗೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ 2,027 ಪ್ರಕರಣಗಳು ವರದಿಯಾಗಿವೆ