ಕೋವಿಡ್ ಮಾರಣಾಂತಿಕ ಕಾಯಿಲೆ ಅಲ್ಲ, ಶೇ. 95 ರಷ್ಟು ಮಂದಿ ಗುಣಮುಖ- ಹೆಚ್ಚಿನ ಜಾಗೃತೆ ವಹಿಸಿ: ಡಾ. ಶಶಿಕಿರಣ್
ಉಡುಪಿ ಮೇ.6(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಿಂಗಳ ಮಾಧ್ಯಮ ಸಂವಾದ’ ಕಾರ್ಯಕ್ರಮ ಉಡುಪಿಯ ಐಎಂಎ ಭವನದಲ್ಲಿ ಇಂದು ನಡೆಯಿತು.
ಕೊರೋನಾ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ತಜ್ಞ ವೈದ್ಯರುಗಳೊಂದಿಗೆ ನಡೆಸಲಾಯಿತು.
ಇಂದು ನಡೆದ ಕಾರ್ಯಕ್ರಮದಲ್ಲಿ ಆದರ್ಶ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಿ ಎಸ್ ಚಂದ್ರಶೇಖರ್ ಅವರು ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಕೋವಿಡ್ ತೀವ್ರತೆ ಹೆಚ್ಚಾಗಿದೆ. ಅಲ್ಲದೆ ಸೋಂಕಿನಿಂದ ಪ್ರಾಣ ಕಳೆದು ಕೊಳ್ಳುತ್ತಿರುವವರ ಸಂಖ್ಯೆಯೂ ಈ ಭಾರಿ ಅಧಿಕವಾಗಿದೆ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ 190 ಮಂದಿ ಸೊಂಕಿಗೆ ಬಲಿಯಾಗಿದ್ದರು. ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿತ್ತು. ಆದರೆ ಈ ಭಾರಿ 30 ರಿಂದ 35 ವರ್ಷದವರು ಸೋಂಕಿನಿಂದ ಮೃತಪಡುತ್ತಿದ್ದಾರೆ ಎಂಬುದು ನೋವಿನ ಸಂಗತಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ವೈದ್ಯರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಗೆ ದಾಖಲಾಗುವ ಸೋಂಕಿತರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವೈದ್ಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂದರು.
ಕಳೆದ ಬಾರಿಗಿಂತ ಈ ಬಾರಿ ಊಹಿಸಲಾಗದ ರೀತಿಯಲ್ಲಿ ಕೊರೋನಾ ಜಿಲ್ಲೆಯ ಮೇಲೆ ಪ್ರಭಾವ ಬೀರಿದೆ. ಎಲ್ಲಾ ಕಾಯಿಲೆಗಳಿಗಿಂತ ಕೊರೋನಾಗೆ ಸಾಕಷ್ಟು ಪ್ರಚಾರ ನೀಡಲಾಗುತ್ತಿದೆ. ಕೊರೋನಾ ಪ್ರಕರಣಗಳು, ಆಕ್ಸಿಜನ್, ಬೆಡ್ ಗಳು, ವ್ಯಾಕ್ಸಿನೇಶನ್ ಹೀಗೆ ಅನೇಕ ವಿಚಾರಗಳಿಗೆ ಸಂಬಂದಿಸಿ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಅದೇ ರೀತಿ ಕೋವಿಡ್ ನಿಯಂತ್ರಣ ಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಸಾರ್ವಜನಿಕರು ಕೊರೋನಾ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ ಸುರಕ್ಷಿತರಾಗಿರುವಂತೆ ಸಲಹೆ ನೀಡಿದರು.
ಈ ವೇಳೆ ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಉಮೇಶ್ ಪ್ರಭು ಮಾಹಿತಿ ನೀಡಿ, ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಸರ್ಕಾರ ಸೂಚಿಸಿರುವ ನಿಯಂತ್ರಣ ಉಪಕ್ರಮಗಳನ್ನು ಅನುಸರಿಸಬೇಕು. ಜೊತೆಗೆ ಅರ್ಹರೆಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದರು. ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾದಂತೆ ವೈದ್ಯಕೀಯ ಸಿಬಂದಿ ಕೊರತೆ ಕಂಡುಬರುತ್ತದೆ. ಎಲ್ಲ ವೈದ್ಯರೂ ಚಿಕಿತ್ಸೆಯಲ್ಲಿ ಮಗ್ನರಾಗಿರುವುದರಿಂದ ಲಭ್ಯ ಅವಧಿಯಲ್ಲಿ ಕೋವಿಡ್ ಪೀಡಿತರ ಚಿಕಿತ್ಸೆಯಲ್ಲಿ ತೊಡಗಿಕೊಳ್ಳಬಹುದು ಎಂದರು.
ಐಎಂಎ ಸಂಘಟನಾ ಕಾರ್ಯದರ್ಶಿ ಹಾಗೂ ಸರ್ಜನ್ ಡಾ. ವೈ. ಸುದರ್ಶನ ರಾವ್ ಅವರು ಮಾಹಿತಿ ನೀಡಿ, ಸಾಂಕ್ರಾಮಿಕ ರೋಗ ಕೊರೋನಾ ಲಕ್ಷಣ ಕಂಡುಬಂದ ತಕ್ಷಣ ವಿಳಂಬವಿಲ್ಲದೆ ಪರೀಕ್ಷೆಗೊಳಗಾಗಬೇಕು. ಆರಂಭಿಕ ಹಂತದಲ್ಲಿ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ. ಮನೆ ಆರೈಕೆಯಲ್ಲಿ ತೊಡಗಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೀಡಿತರಿಂದ ಮನೆಯ ಇತರ ಸದಸ್ಯರಿಗೆ ರೋಗ ಪಸರಿಸದಂತೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದರು.
ಡಾ. ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಮಾಹಿತಿ ನೀಡಿ, ಈ ಬಾರಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮ ಮತ್ತೆ ಕೊರೊನಾ ಬಾಧೆ ಶುರುವಾಯಿತು.ಇನ್ನಾದರೂ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಪರಿಸ್ಥಿತಿ ಕೈಮೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ ಕೋವಿಡ್ ಮಾರಣಾಂತಿಕ ಕಾಯಿಲೆ ಅಲ್ಲ. ರೋಗಪೀಡಿತರ ಪೈಕಿ ಶೇ. 95ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಕೇವಲ 5.8 ಶೇ.ದಷ್ಟು ಮಂದಿ ಮಾತ್ರ ಸಾವನ್ನಪ್ಪುತ್ತಾರೆ ಎಂದರು.
ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಮನೋಚಿಕಿತ್ಸಕ ಡಾ. ವಿರೂಪಾಕ್ಷ ದೇವರಮನೆ, ಸೋಂಕು ಪೀಡಿತರು ತನ್ನಿಂದ ಇನ್ನೊಬ್ಬರಿಗೆ ಸೋಂಕು ಹರಡಬಾರದು ಎಂಬ ಸ್ವಯಂ ಎಚ್ಚರಿಕೆ ವಹಿಸಬೇಕು. ಸೋಂಕಿನ ಕುರಿತು ಸುಳ್ಳು ಸುದ್ದಿ ಅಥವಾ ಅತಿರಂಜಿತ ಸುದ್ದಿ ಬಿತ್ತರಗೊಳ್ಳದಂತೆ ಮಾಧ್ಯಮದವರು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
ಈ ಸಂವಾದದಲ್ಲಿ , ಕಾರ್ಯದರ್ಶಿ ಡಾ.ಪ್ರಕಾಶ್ ಭಟ್, ಜಿಲ್ಲಾ ಸಂಯೋಜಕ ಡಾ.ವೈ. ಎಸ್.ರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.