ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು- ಶಾಸಕ, ಸಂಸದರನ್ನು ಬಂಧಿಸಬೇಕು: ಕಾಂಗ್ರೆಸ್
ಬೆಂಗಳೂರು, ಮೇ.06: ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು ಇದಕ್ಕೆ ಸಂಬಂಧಿಸಿದ ಶಾಸಕ, ಸಂಸದರನ್ನು ಬಂಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಸರಕಾರವನ್ನು ಟೀಕಿಸಿದೆ.ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ “ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸುವುದೆಂದರೆ ಇದೇ. ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು, ಇದಕ್ಕೆ ಸಂಬಂಧಿಸಿದ ಶಾಸಕ, ಸಂಸದರನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದೆ.
“ರಾಜ್ಯದಲ್ಲಿ ಪ್ರತಿನಿತ್ಯ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ : 1,043 ಟನ್, ಆಸ್ಪತ್ರೆಗಳ ಅಗತ್ಯತೆ : 1,792 ಟನ್. ಆದರೂ ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾಗಿರೋದು : 865 ಟನ್ ಆದರಲ್ಲೂ ನಿಜವಾಗಿ ಸಿಗುತ್ತಿರೋದು : 675 ಟನ್! ಇದರೆ ಬಗ್ಗೆ ಬಿಜೆಪಿಯ 25 ಸಂಸದರ ಮೌನ ದ್ರೌಪದಿ ವಸ್ತ್ರಾಪಹರಣದ ವೇಳೆಯ ಕೌರವರ ಆಸ್ಥಾನದಂತಿದೆ! ನಾಚಿಕೆಗೇಡು!” ಎಂದಿದೆ.
“ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ. ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ. ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು! ತಮ್ಮ ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣ ಲೇಪಿಸಲು ಯತ್ನಿಸಿದ ಕುತಂತ್ರ ಬೆತ್ತಲಾಗಿದೆ” ಎಂದು ಆರೋಪಿಸಿದೆ.
“ಬಿಜೆಪಿ ಕರೊನಗಿಂತಲೂ ಭೀಕರ ವೈರಸ್” ಜನ ನರಳಿ ನರಳಿ ಸಾಯುತ್ತಿದ್ದಾರೆ, ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತಾವೇ ಕಿಂಗ್ ಪಿನ್‌ಗಳಾಗಿ, ತಾವೇ ಹಗರಣ ಬಯಲಿಗೆಳೆಯುವ ನಾಟಕವಾಡಿ ಅದಕ್ಕೆ ಕೋಮುಬಣ್ಣ ಲೇಪಿಸಿದ “ಮಹಾನಾಟಕ” ಬಯಲಾಗಿದೆ. ತಮ್ಮ ಭ್ರಷ್ಟಾಚಾರ ಹಾಗೂ ವೈಫಲ್ಯ ಮರೆಮಾಚಲು ನಡೆಸಿದ ಕುತಂತ್ರ ಬೆತ್ತಲಾಗಿದೆ ಎಂದು ಬರೆದುಕೊಂಡಿದೆ.