ಉಡುಪಿ ಜಿಲ್ಲೆಯಲ್ಲಿಲ್ಲ ಲಸಿಕೆ, ಕೇಂದ್ರಗಳಿಗೆ ಬರುವುದು ಬೇಡ- ನೋಡಲ್ ಅಧಿಕಾರಿ
ಉಡುಪಿ, ಮೇ.6(ಉಡುಪಿ ಟೈಮ್ಸ್ ವರದಿ): ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಕೋವಿಡ್ ಲಸಿಕೆ ಪರಿಣಾಮಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ.
ಈ ನಡುವೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪೂರೈಕೆ ವಿಳಂಬವಾಗಿರುವ ಕಾರಣ ಜಿಲ್ಲೆಯಲ್ಲಿ ಒಂದು ವಾರ ಲಸಿಕಾ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಯ ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ಡಾ.ಎಂ.ಜಿ.ರಾಮ ಅವರು ಮಾಹಿತಿ ನೀಡಿ, ಸದ್ಯ ಒಂದು ವಾರಗಳ ಕಾಲ ಲಸಿಕೆ ಜಿಲ್ಲೆಗೆ ಬರುವುದಿಲ್ಲ ಎಂಬ ಮಾಹಿತಿ ದೊರೆತಿದೆ. ಆದುದರಿಂದ ಜನರು ಲಸಿಕಾ ಕೇಂದ್ರಗಳಿಗೆ ಬರುವುದು ಬೇಡ. ಮುಂದೆ ಲಸಿಕೆ ಬಂದ ಬಳಿಕ ಮಾಹಿತಿ ನೀಡಲಾಗುವುದು.
ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 6 ವಾರ ದಾಟಿದ 287 ಮಂದಿಯನ್ನು ಪಟ್ಟಿ ಮಾಡಲಾಗಿದ್ದು, ಎರಡು ದಿನಗಳಲ್ಲಿ ಕೋವ್ಯಾಕ್ಸಿನ್ ಜಿಲ್ಲೆಗೆ ಪೂರೈಕೆ ಆಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಸದ್ಯ ಜಿಲ್ಲೆಯ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 13, ಕಾಪು 10, ಕುಂದಾಪುರ- 16, ಬೈಂದೂರು- 15 ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 19 ಸೇರಿದಂತೆ ಒಟ್ಟು 74 ಸರಕಾರಿ ಕೊರೋನ ಲಸಿಕಾ ಕೇಂದ್ರಗಳಿವೆ.
ಈವರೆಗೆ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರಲ್ಲಿ 22,571ಮಂದಿಗೆ ಮೊದಲ ಡೋಸ್, 17,963 ಮಂದಿಗೆ ಎರಡನೇ ಡೋಸ್, ಮುಂಚೂಣಿ ಕಾರ್ಯಕರ್ತರಲ್ಲಿ 4,591 ಮಂದಿಗೆ ಮೊದಲ ಡೋಸ್, 3,055 ಮಂದಿಗೆ ಎರಡನೇ ಡೋಸ್, 45 ವರ್ಷ ಮೇಲ್ಪಟ್ಟವರಲ್ಲಿ 1,67,401 ಮಂದಿಗೆ ಮೊದಲ ಡೋಸ್, 34,987 ಮಂದಿಗೆ ಎರಡನೇ ಡೋಸ್ ಈವರೆಗೆ ನೀಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 1,94,563 ಮಂದಿಗೆ ಮೊದಲ ಡೋಸ್ ಮತ್ತು 56,005 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಲಸಿಕೆ ಪೂರೈಕೆಯಲ್ಲಿ ವಿಳಂಬ ಆಗಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎರಡನೇ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುತ್ತಿದೆ. ಇನ್ನು ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಲಸಿಕೆ ಕೊರತೆ ಎದುರಾಗಿದೆ. ಆದ್ದರಿಂದ ಕೋವಿಲ್ ಮೊದಲ ಡೋಸ್ ಪಡೆದು ಎಂಟು ವಾರ ದಾಟಿದವರನ್ನು ಗುರುತಿಸಿ ಎರಡನೇ ಡೋಸ್ ನೀಡಲಾಗುತ್ತಿದೆ. ಲಸಿಕೆ ಕೊರತೆಯಿಂದಾಗಿ ಸೈಂಟ್ ಸಿಸಿಲಿಸ್ ಗೆ ಲಸಿಕೆ ಪಡೆಯಲು ಬಂದಿದ್ದ ನೂರಾರು ಮಂದಿಯನ್ನು, ಲಸಿಕೆ ಬಂದ ಬಳಿಕ ಆಶಾ ಕಾರ್ಯಕರ್ತರು ಮೊಬೈಲ್ ಸಂದೇಶ ಕಳುಹಿಸುತ್ತಾರೆ ಎಂದು ಹೇಳಿ ವಾಪಸು ಕಳುಹಿಸಲಾಗಿದೆ.
ಅದೇ ರೀತಿ ಜಿಲ್ಲಾಸ್ಪತ್ರೆಗೂ ಬಂದಿದ್ದ ನೂರಾರು ಮಂದಿಯನ್ನು ವಾಪಾಸು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ನಡುವೆ ಎಲ್ಲಾ ಸರಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲು ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸರಕಾರಕ್ಕೆ ಒತ್ತಡ ಹೇರಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
I want to know about Korona .
Thanks.