ಆತ್ಮ ನಿರ್ಭರ ಹೆಸರಲ್ಲಿ ಆತ್ಮ ಬರ್ಭರತೆ ಸೃಷ್ಠಿಸುತ್ತಿದ್ದೀರಿ ಏಕೆ?- ಯು.ಟಿ.ಖಾದರ್
ಮಂಗಳೂರು, ಮೇ.05: “ಇದು ಚಾಮರಾಜನಗರ ಸಾವಿನ ದುರಂತವನ್ನು ಜನರ ಗಮನದಿಂದ ಬೇರೆಡೆಗೆ ಸೆಳೆದೊಯ್ಯುವ ಯತ್ನವೇ?. ಚಾಮರಾಜನಗರದಲ್ಲಿ ದುರಂತ ಸಂಭವಿಸಿದಾಗ ನೀವು ಏಕೆ ಮಾತನಾಡಲಿಲ್ಲ?” ಎಂದು ಶಾಸಕ ಯು.ಟಿ.ಖಾದರ್ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶ್ನಿಸಿದ್ದಾರೆ.
ಬೆಡ್ ಬ್ಲಾಕಿಂಗ್ ಹಗರಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಬಿಎಂಪಿ ವ್ಯಾಪ್ತಿಗಳಲ್ಲಿ ಎಂಟು ವಲಯಗಳಿವೆ. ಆ ಪೈಕಿ ತುಳಸಿ ಮದ್ದೇನಿ ಹಾಗೂ ವೀರಭದ್ರಯ್ಯ ಅವರಿಗೆ ಬೆಂಗಳೂರು ದಕ್ಷಿಣ ವಲಯ ವಾರ್ ರೂಮ್ ಜವಾಬ್ದಾರಿ ನೀಡಲಾಗಿತ್ತು. ಆದರೆ, ದಕ್ಷಿಣ ವಲಯಕ್ಕೆ ಸಂಬಂಧಿಸದ ಸರ್ಪರಾಜ್ ಖಾನ್ ಅವರ ವಿರುದ್ದ ಏಕೆ ಆರೋಪ ಮಾಡಿದ್ದು? ಎಂದು ಕೇಳಿದ್ದಾರೆ.
ತುಳಸಿ ಮದ್ದೇನೇನಿ ಹಾಗೂ ವೀರಭದ್ರಯ್ಯ ಅವರೇ ಜಾಹೀರಾತು ಕರೆದು ಅರ್ಜಿ ಸ್ವೀಕರಿಸಿದ ಬಳಿಕ ವಾಕಿನ್ ಸಂದರ್ಶನ ನಡೆಸಿ 214 ಸಿಬ್ಬಂದಿ ನೇಮಕಾತಿ ಮಾಡಿದ್ದಾರೆ. ಇದಲ್ಲಿ 17 ಮಂದಿ ಮಾತ್ರವೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, 7-8 ವೈದರಲ್ಲಿ 2 ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಿರುವಾಗ ಪ್ರಕರಣದಲ್ಲಿ ಒಂದೇ ಸಮುದಾಯದ ಹೆಸರು ಪ್ರಸ್ತಾಪಿಸಿರುವುದರ ಹಿಂದಿನ ಉದ್ದೇಶ ಏನು? ಎಂದು ಪ್ರಶ್ನಿಸಿದ್ದಾರೆ.
ಇದು ಕಾಲ್ ಸೆಂಟರ್ ಮಾದರಿಯ ಕೆಲಸವಾಗಿರುವುದರಿಂದ, ಕರೆ ಸ್ವೀಕರಿಸಿ ಮಾಹಿತಿ ನೀಡುವುದು ಮಾತ್ರವೇ ಇವರ ಕೆಲಸ. ಅದರೆ, ಅಧಿಕಾರಿಗಳು ವಾಕಿನ್ ಸಂದರ್ಶನ ಮಾಡುವ ಸಂದರ್ಭ ನಿಮಗೆ ಮಾಹಿತಿ ಇರಲಿಲ್ಲವೇ?. ದಕ್ಷಿಣ ವಲಯಕ್ಕೆ ಸಂಬಂಧಿಸದ ಅಧಿಕಾರಿ ಯಾರು ಎನ್ನುವ ವಿಚಾರ ನಿಮಗೆ ತಿಳಿದಿರಲಿಲ್ಲವೇ?. ನೀವು ಮಾಹಿತಿ ಇಲ್ಲದೇ ಮಾತನಾಡಿದ್ದರೆ ನಿಮ್ಮ ಪ್ರಬುದ್ದತೆಯನ್ನು ಪ್ರದರ್ಶಿಸುತ್ತದೆ. ಅಲ್ಲದೇ, ಸಂಸದರಿಗೆ ಮಾಹಿತಿಯ ಕೊರತೆ ಇದೆ ಎನ್ನುವ ಬಗ್ಗೆ ಸಂದೇಶ ರವಾನೆಯಾಗುತ್ತದೆ.
ವಿಚಾರ ಬಗ್ಗೆ ಗೊತ್ತಿದ್ದು, ಗೊತ್ತಿಲ್ಲದವರಂತೆ ಆರೋಪಿಸಿರುವುದರ ಹಿಂದಿನ ದುರುದ್ದೇಶ ಏನು? ಎಂದು ಕೇಳಿದ್ದಾರೆ. ಮಗುವಿಗೆ ಚಿವುಟಿ ತೊಟ್ಟಿಲು ತೂಗೋದು ನೀವೇ. ಮತ್ತೆ ಏಕೆ ಈ ಹೈಡ್ರಾ?. ನಿಮ್ಮ ಸರ್ಕಾರದ ಅಡಿಯಲ್ಲೇ ದಂಧೆ ನಡೆಯುತ್ತಿದ್ದರೂ ಕೂಡಾ ಅದನ್ನು ತಡೆಯಲಾಗಿದೆ. ಆತ್ಮನಿರ್ಭರ ಭಾರತದ ಹೆಸರಿನಲ್ಲಿ ಏಕೆ ಆತ್ಮ ಬರ್ಬರತೆ ಸೃಷ್ಟಿ ಮಾಡುತ್ತಿದ್ದೀರಿ? ಎಂದು ಕೇಳಿದ್ದಾರೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರದಿಂದ ಪೂರೈಕೆಗೆ ನೆರವು ಕೊಡಿಸಲು ಏಕೆ ಆಸಕ್ತಿ ತೋರಲಿಲ್ಲ?. ಘಟನೆಯ ಸಂಬಂಧ ಈಗಾಗಲೇ ಸಿಸಿಬಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ನೀವು ಹೆಸರಿಸಿದ ವ್ಯಕ್ತಿಗಳ ಪಾತ್ರವಿಲ್ಲದೇ ಇದ್ದಲ್ಲಿ, ನೀವು ಕ್ಷಮೇ ಕೇಳುತ್ತೀರಾ ಅಥವಾ ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.