ಉಡುಪಿ: ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ- ಐದು ಅಂಗಡಿ ಮಾಲಕರ ವಿರುದ್ದ ದೂರು ದಾಖಲು
ಉಡುಪಿ ಮೇ. 5(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಇಂದು ಕೋವಿಡ್ ನಿಯಮ ಉಲ್ಲಂಘಿಸಿರುವ ಅನೇಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಂತೆ ಪಡುಬಿದ್ರೆಯಲ್ಲಿ 4 ಹಾಗೂ ಶಂಕರ ನಾರಾಯಣದಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಇಂದು ಪಡುಬಿದ್ರೆ ಠಾಣಾ ಪೊಲೀಸರು ಇಲಾಖಾ ವಾಹನದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಪಡುಬಿದ್ರೆ ಪೇಟೆಯಲ್ಲಿ ಇರುವ ಅರುಣ್ ಪಿಕೆ ಎಂಬವರ ಬಟ್ಟೆ ಅಂಗಡಿ, ಪಡುಬಿದ್ರೆ -ಕಾರ್ಕಳ ರಸ್ತೆ ಸಮೀಪ ಇರುವ ಅಫ್ರಿದ್ ರವರ ಶೂ ಅಂಗಡಿ, ಪಡುಬಿದ್ರೆ ಪೇಟೆಯಲ್ಲಿ ಇರುವ ಪ್ರಸಾದ್ ರವರ ಬಟ್ಟೆ ಅಂಗಡಿ ಹಾಗೂ ಅಸ್ಫಾಕ್ ರವರ ಬಟ್ಟೆ ಅಂಗಡಿಯನ್ನು ಕೋವಿಡ್ ನಿಯಮ ಉಲ್ಲಂಘಿಸಿ ತೆರೆದುಕೊಂಡಿರುವುದು ಕಂಡು ಬಂದಿದೆ. ಅದರಂತೆ ಈ ನಾಲ್ಕು ಅಂಗಡಿ ಮಾಲಕರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದಲ್ಲಿ ಸುಧಾಕರ ನಾಯ್ಕ ಹಾಗೂ ಆಶಾಲತಾ ಎಂಬವರು ಕೋವಿಡ್ ಮಾರ್ಗ ಸೂಚಿಯಲ್ಲಿ ನಿಗದಿ ಪಡಿಸಿರುವ ಅವಧಿ ಮೀರಿ ಜನರಲ್ ಸ್ಟೋರ್ ತೆರೆದುಕೊಂಡು ಯಾವುದೇ ಮುನ್ನೆಚ್ಚರಿಕಾ ಕ್ರಮ ಅಳವಡಿಸದೇ ವ್ಯಾಪಾರ ವಹಿವಾಟು ನಡೆಸಿ ನಿಯಮ ಉಲ್ಲಂಘಿಸಿರುವುದಾಗಿ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ