ಉಡುಪಿಯಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ವದಂತಿ: ಇದು ಸತ್ಯಕ್ಕೆ ದೂರವಾದ ವಿಚಾರ ಸಂಸದೆ ಶೋಭಾ
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ಎನ್ನುವ ವದಂತಿಗಳು ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಹಾಗೂ ಬೆಡ್‍ಗಳ ಸಮಸ್ಯೆ ಇಲ್ಲ, ಯಾರೂ ಆತಂಕಗೊಳ್ಳಬೇಕಾಗಿಲ್ಲ” ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಬುಧವಾರ ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.”ಉಡುಪಿ ಜಿಲ್ಲೆಯಲ್ಲಿ 43 ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಗುರುತಿಸಲಾಗಿದೆ. 1924 ಬೆಡ್‍ಗಳಿದ್ದು, 960 ಅಕ್ಸಿಜನ್‍ಬೆಡ್‍ಗಳಿವೆ. ಈಗ 245 ಬೆಡ್‍ಗಳು ಮಾತ್ರ ಭರ್ತಿಯಾಗಿದ್ದು, 736 ಅಕ್ಸಿಜನ್ ಬೆಡ್ ಖಾಲಿ ಇವೆ” ಎಂದು ತಿಳಿಸಿದರು.”ಕುಂದಾಪುರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 89 ಮಂದಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ 145 ಮಂದಿ ಒಟ್ಟು 234 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎನ್ನುವ ಸಾಕಷ್ಟು ದೂರುಗಳು ಬರುತ್ತಿದ್ದು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲು ತಾಲೂಕು ಮಟ್ಟದ ಅಧಿಕಾರಿಯೋರ್ವರನ್ನು ನೋಡೆಲ್ ಅಧಿಕಾರಿಯಾಗಿ ನಿಯೋಜಿಸಲಾಗುವುದು.
ನಾಳೆಯಿಂದಲೇ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಓರ್ವ ಅಧಿಕಾರಿ ನೋಡೆಲ್ ಅಧಿಕಾರಿಯಾಗಿ ಕೊರೊನಾ ಮೀಸಲು ಬೆಡ್‍ಗಳ ಬಗ್ಗೆ ನಿಗಾ ವಹಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ” ಎಂದರು.”ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆಯಾಗಿಲ್ಲ. ಅಂತ ಕೊರತೆ ಎದುರಾದರೂ ಪಕ್ಕದ ಜಿಲ್ಲೆಗಳಿಂದ ತರಿಸಿಕೊಳ್ಳಲಾಗುತ್ತಿದೆ. ರೆಮಿಡಿಸಿವಿರ್ ಅಗತ್ಯದಷ್ಟು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಅಲ್ಲಲ್ಲಿ ಕೊರೊನಾ ಕೇರ್ ಸೆಂಟರ್ ಮಾಡುವ ಬಗ್ಗೆಯೂ ತೀರ್ಮಾನ ತಗೆದುಕೊಳ್ಳಲಾಗುವುದು. ಹಾಸ್ಟೆಲ್‍ಗಳು ಮೂರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕೊರೊನಾ ಕೇರ್ ಸೆಂಟರ್‌ಗಳಾಗಿ ಬಳಸಿಕೊಳ್ಳಲಾಗುವುದು.
ಕುಂದಾಪುರದ ಹಳೆ ಆದರ್ಶ ಆಸ್ಪತ್ರೆಯನ್ನು ಕೊರೊನಾ ಸೆಂಟರ್ ಆಗಿ ಬಳಸಿಕೊಳ್ಳಲು ಸಿದ್ದತೆ ಮಾಡಲಾಗುತ್ತಿದೆ” ಎಂದರು.”ವ್ಯಾಕ್ಸಿನ್ ಕೊರತೆ ಇದೆ. ಬೇಡಿಕೆಯಷ್ಟು ಸರಬರಾಜು ಆಗುತ್ತಿಲ್ಲ. ಉತ್ಪಾದನೆ ಕಡಿಮೆಯಾಗಿದೆ. ಕೋವಿಶಿಲ್ಡ್ ಅನ್ನು ಮೊದಲ ಡೋಸ್ ಪಡೆದವರಿಗೆ ಆದ್ಯತೆಯ ಮೇಲೆ ಎರಡನೇ ಡೋಸ್ ನೀಡಲಾಗುತ್ತಿದೆ” ಎಂದರು.”ಮನೆಯಿಂದ ನೇರ ಐಸಿಯು ಹೋಗುವಂತ ಸ್ಥಿತಿ ಅಪಾಯಕಾರಿ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿದರೆ ಇಂತಹ ಸಮಸ್ಯೆಗಳು ಇರುವುದಿಲ್ಲ. ಮೊದಲು ನಿರ್ಲಕ್ಷ್ಯ ಮಾಡಿದರೆ ನೇರ ಐಸಿಯುಗೆ ದಾಖಲಾಗುವ ಸನ್ನಿವೇಶ ಬರಬಾರದು” ಎಂದು ಜಿಲ್ಲಾಧಿಕಾರಿ ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ತಾ.ಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಉಪಸ್ಥಿತರಿದ್ದರು.
“ಕುಂದಾಪುರದಲ್ಲಿಯೂ ಆಕ್ಸಿಜನ್ ಘಟಕ ಸ್ಥಾಪನೆಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೀಘ್ರ ಇಲ್ಲಿಯೆ ಆಕ್ಸಿಜನ್ ಉತ್ಪಾದನೆ ಮಾಡುವ ಪ್ರಕ್ರಿಯೆಯೂ ಆರಂಭವಾಗಲಿದೆ. ಜಿಲ್ಲೆಯಲ್ಲಿ ದೊಡ್ಡದಾದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣದ ಬಗ್ಗೆಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ಸಂಸದರು ತಿಳಿಸಿದರು. ಕೊರೊನಾ ನಿಯಂತ್ರಣದ ಕುರಿತು ನಡೆದ ಸಭೆಗೆ ಮಾದ್ಯಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಸಭೆಗೆ ಮಾಧ್ಯಮಗಳಿಗೆ ಆಹ್ವಾನ ನೀಡಿಯೂ ಬಳಿಕ ಅಧಿಕಾರಿಗಳು, ಪಕ್ಷದ ಪ್ರಮುಖರು, ಚುನಾಯಿತ ಪ್ರತಿನಿಧಿಗಳಿಗಷ್ಟೇ ಸೀಮಿತಗೊಳಿಸಲಾಗಿತ್ತು.