ಉಡುಪಿ: ಒಂದೇ ದಿನ ದಾಖಲೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ, ಮೂವರ ಬಲಿ!
ಉಡುಪಿ ಮೇ 5(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಇಂದು ಒಂದೇ ದಿನ ದಾಖಲೆಯ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇಂದು ಜಿಲ್ಲೆಯಲ್ಲಿ 1656 ಮಂದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.ಅಲ್ಲದೆ ಜಿಲ್ಲೆಯಲ್ಲಿ ಇಂದು ಮೂರು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದು ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್ ಪಾಸಿಟಿವ್ ಪ್ರಕಾರಣಗಳ ಪೈಕಿ ಉಡುಪಿ ತಾಲೂಕೊಂದರಲ್ಲೇ ಬರೋಬ್ಬರಿ 879 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು ಕುಂದಾಪುರ 399, ಕಾರ್ಕಳ 371 ಹಾಗೂ ಹೊರ ಜಿಲ್ಲೆಯ 7 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಈ ಮೂಲಕ ಒಂದೇ ಸಮನೆ ಕೋವಿಡ್ ಸಕ್ರಿಯ ಪ್ರಕರಣ ಗಳ ಸಂಖ್ಯೆ 3925 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ ಉಡುಪಿಯ 65 ವರ್ಷದ , 81 ವರ್ಷದ ಹಾಗೂ 53 ವರ್ಷದ ವ್ಯಕ್ತಿಗಳು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.ಮೇ. 4 ರಂದು 433 ಮಂದಿ ಸೋಂಕಿತರು ಆಸ್ಪತ್ರೆ ಯಿಂದ ಗುಣಮುಖ ರಾಗಿ ಬಿಡುಗಡೆ ಹೊಂದಿದ್ದಾರೆ.
ಮೇ. 4 ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 5,17,395 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 35,366 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ವರೆಗೆ ಜಿಲ್ಲೆಯ ಲ್ಲಿ 31,235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ವರೆಗೆ ಜಿಲ್ಲೆಯಲ್ಲಿ206 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಒಂದೇ ದಿನ 1656 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4000 ದ ಅಂಚಿನಲ್ಲಿ ಇರುವುದು, ಇಷ್ಟು ದಿನ ಕೊಂಚ ನಿರಾಳರಾಗಿದ್ದ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ
ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಬುಧವಾರ ಒಂದೇ ದಿನ ಬರೋಬ್ಬರಿ 346 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 16884ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 50,112 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 17,41,046ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 23,106 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 8.63,380ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 161 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು 26841 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 12,36854ಕ್ಕೆ ಏರಿಕೆಯಾಗಿದೆ. ಇನ್ನು 4,87,288 ಸಕ್ರೀಯ ಪ್ರಕರಣಗಳಿವೆ