ಹೋಂ ಐಸೊಲೇಶನ್’ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯ ಇತರ ಸದಸ್ಯರಿಗೆ ಸೋಂಕು- ಕುಂದಾಪುರ ಬ್ಲಾಕ್ ಕಾಂಗ್ರೆಸ್
ಉಡುಪಿ, ಮೇ 5(ಉಡುಪಿ ಟೈಮ್ಸ್ ವರದಿ): ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹೋಂ ಐಸೊಲೇಶನ್ ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯ ಇತರ ಸದಸ್ಯರಿಗೆ ಸೋಂಕು ಹರಡುತ್ತಿದೆ. ಆದ್ದರಿಂದ ಮನೆಯಲ್ಲಿ ಐಸೋಲೇಶನ್ ಗೆ ಸರಿಯಾದ ವ್ಯವಸ್ಥೆ ಇಲ್ಲದವರಿಗೆ ಹಾಗೂ ಆಸ್ಪತ್ರೆಗೆ ಸೇರಬೇಕಾದ ಅಗತ್ಯ ಇಲ್ಲದವರಿಗೆ ಶೀಘ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕುರಿತು ಮತ್ತು ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಇರುವ ನ್ಯೂನ್ಯತೆ ಸರಿಪಡಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಯವರಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬರೆದ ಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಪತ್ರದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ರುವ ಸಮಸ್ಯೆ ಗಳನ್ನು ತಿಳಿಸಿ ಕೆಲವೊಂದು ಪರಿಹಾರದ ಸಲಹೆ ನೀಡಿರುವ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ . ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು, ಕಳೆದ ಕೆಲವು ದಿನಗಳಿಂದ ಕುಂದಾಪುರ ತಾಲೂಕಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ ವರ್ಷದಂತೆ ಸೋಂಕು ಹರಡುವಿಕೆ ತಡೆಯುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಜನತಾ ಕರ್ಪೂ ಕಾರಣದಿಂದ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಜನರು ಊರಿಗೆ ಆಗಮಿಸಿರುವುದರಿಂದ ಮತ್ತು ಸೋಂಕಿತರು ಪ್ರಾಥಮಿಕ ಸಂಪರ್ಕದಲ್ಲಿರುವವರು ಬೇಕಾಬಿಟ್ಟೆ ಒಡಾಡುತ್ತಿರುವುದರಿಂದ ಸೋಂಕು ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ, ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ರುವ ಕೆಲವೊಂದು ಸಮಸ್ಯೆ ಗಳ ಕುರಿತು ಪ್ರಸ್ತಾಪಿಸಿ ಆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಬರೆದಿರುವ ಪತ್ರದಲ್ಲಿರುವ ಸೂಚಿಸಿರುವ ಸಮಸ್ಯೆಗಳು ಹೀಗಿವೆ- ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹೋಂ ಐಸೋಲೇಶನ್‌ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯ ಇತರ ಕುಟುಂಬ ಸದಸ್ಯರಿಗೆ ಸೋಂಕು ಹರಡುತ್ತಿದೆ. ಐಸೋಲೇಶನ್‌ಗೆ ಸರಿಯಾದ ವ್ಯವಸ್ಥೆ ಇಲ್ಲದವರಿಗೆ ಮತ್ತು ಆಸ್ಪತ್ರೆಗೆ ಸೇರಬೇಕಾದ ಅಗತ್ಯವಿಲ್ಲದವರಿಗೆ ಶೀಘ್ರವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಪಿಡ್ ಟೆಸ್ಟ್ ಕಿಟ್‌ಗಳ ಕೊರತೆ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ. ಹಾಗೂ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ಕುಂದಾಪುರ ತಾಲೂಕಿನಲ್ಲಿ ಅಂಬುಲೆನ್ಸ್‌ಗಳ ಕೊರತೆಯಿರುವುದರಿಂದ ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ಅಂಬುಲೆನ್ಸ್ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಹೆಚ್ಚು ಪರೀಕ್ಷೆ ನಡೆಸಬೇಕು. ಹಾಗೂ ಶಂಕಿತರ ಮನೆಗೆ ಹೋಗಿ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿ ಕೊಂಡಿದ್ದಾರೆ.
ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಕರೋನಾ ನಿಯಂತ್ರಣದಲ್ಲಿ ಆಸಕ್ತಿ ಇಲ್ಲ. ಸೋಂಕಿತರಿಗೆ ಇವರಿಂದ ಸಹಕಾರ ಸಿಗುತ್ತಿಲ್ಲ ಎಂದ ಅವರು, ಪ್ರತಿ 2 ದಿನಕ್ಕೊಮ್ಮೆ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ ನಡೆಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆ ನಿಕಟ ಸಂಪರ್ಕದಲ್ಲಿರಬೇಕು ಎಂದಿದ್ದಾರೆ. ಅಲ್ಲದೆ ಪ್ರಸ್ತುತ ಗ್ರಾಮ ಪಂಚಾಯತ್ ನೌಕರರು ಕಚೇರಿಯಲ್ಲಿ ಕುಳಿತು ಕೇವಲ ಅಂಕಿ ಅಂಶ ನೀಡುವುದಕ್ಕಷ್ಟೆ ಸೀಮಿತವಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇನ್ನು, ಅನುಮತಿ ಪಡೆದ ಮತ್ತು ಪಡೆಯದ ಮದುವೆ ಮುಂತಾದ ಸಮಾರಂಭಗಳಿಗೆ ರಚನೆ ಮಾಡಿರುವ ಕಾರ್ಯಪಡೆ ಪ್ರತಿ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಸಮಾರಂಭ ಆಯೋಜಕರಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿ ನೂರಾರು ಜನರು ಮದುವೆಗೆ ಸೇರಲು ಬಿಡುತ್ತಿರುವುದು ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಆರೋಪಿಸಿದ್ದಾರೆ. ಕುಂದಾಪುರ ಕೋವಿಡ್, ಆಸ್ಪತ್ರೆಗೆ ಸರಬರಾಜು ಆಗುತ್ತಿರುವ ಊಟ ಮತ್ತು ತಿಂಡಿ ಅತ್ಯಂತ ಕಳಪೆಯಾಗಿದ್ದು, ಹೆಚ್ಚಿನ ರೋಗಿಗಳು ಊಟ ಸ್ವೀಕರಿಸುತ್ತಿಲ್ಲ. ಶ್ರೀಮಂತರು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದು, ದೂರದ ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತಿದೆ. ಅಲ್ಲದೆ ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ಮೂಲಭೂತ ಸೌಕರ್ಯ ಒದಗಿಸಿ ಕುಂದಾಪುರದಲ್ಲಿ ಹೆಚ್ಚುವರಿ ಕೋವಿಡ್, ಆಸ್ಪತ್ರೆಪ್ರಾರಂಭಿಸಬೇಕು ಹಾಗೂ ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಶೀಘ್ರವಾಗಿ ಅಗತ್ಯವಿರುವ ತಾಂತ್ರಿಕರು, ನರ್ಸ್ ಗಳು ಮತ್ತು ಡಿ ದರ್ಜೆ ನೌಕರರನ್ನು ನೇಮಿಸಬೇಕು ಮತ್ತು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಒಂದು ಕೋವಿಡ್ ಟೆಸ್ಟ್ ಸೆಂಟರ್ ನಲ್ಲಿ ಜಂಗುಳಿಯಾಗುತ್ತಿದ್ದು, ಇನ್ನೊಂದು ಟೆಸ್ಟ್ ಸೆಂಟರ್ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರೋನಾ ಕರ್ತವ್ಯ ಮತ್ತು ಜಾಗ್ರತೆಗೆ ಬಳಸಿಕೊಳ್ಳುವುದರಿಂದ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬಹುದು ಎಂದು ಸಲಹೆ ನೀಡಿದ್ದಾರೆ. ಈ ಎಲ್ಲಾ ಸಮಸ್ಯೆ ಗಳ ಬಗ್ಗೆ ತುರ್ತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.