ಚಾಮರಾಜನಗರ ದುರಂತ ಮರೆಮಾಚಲು ಬೆಡ್ ಬ್ಲಾಕಿಂಗ್ ಹಗರಣ ಎನ್ನುವ ಡ್ರಾಮ: ಕುಮಾರಸ್ವಾಮಿ
ಮಂಡ್ಯ, ಮೇ.05 : “ಚಾಮರಾಜನಗರ ದುರಂತ ಮರೆಮಾಚಲು ಇದೀಗ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಎನ್ನುವ ಡ್ರಾಮ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರ ತಪ್ಪು ಮಾಡಿದೆ. ಆಕ್ಸಿಜನ್ ಕೊರತೆ ಇದೆ ಎಂದು ಆರೋಗ್ಯ ಸಚಿವರೇ ಹೇಳುತ್ತಿದ್ದಾರೆ. ಇದೀಗ ಚಾಮರಾಜನಗರ ದುರಂತ ಮರೆಮಾಚಲು ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಹೊರತರಲಾಗುತ್ತಿದೆ. ಅಸಲಿಗೆ ಬೆಡ್ ದಂಧೆ ಎನ್ನುವುದೇ ಡ್ರಾಮಾ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಚಾಮರಾಜನಗರ ದುರಂತವು ರಾಜ್ಯ ಸರ್ಕಾರದಿಂದ ಸಂಭವಿಸಿದ ದುರಂತ. ಘಟನೆಯ ಬಗ್ಗೆ ತನಿಖೆ ಮಾಡಿ ಯಾವುದೇ ಪ್ರಯೋಜನವಿಲ್ಲ. ತಪ್ಪು ಸರ್ಕಾರದ್ದೇ ಇರುವಾಗ ಯಾರಿಗೆ ಶಿಕ್ಷೆ ವಿಧಿಸುತ್ತೀರಿ?” ಎಂದು ಕೇಳಿದ್ದಾರೆ.
ಇನ್ನು ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವರನ್ನು ಬಂಧಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಆ ಮಹಿಳೆಯನ್ನು ಯಾರು ನೇಮಕ ಮಾಡಿದ್ದು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.