ಅಕ್ರಮವಾಗಿ ಮರಳುಗಾರಿಕೆ: ಸಿಎಂಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಪತ್ರ

ಉಡುಪಿ: ಜಿಲ್ಲೆಯ ಹಿರಿಯಡ್ಕ ಸ್ವರ್ಣ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಹಾಗೂ ಪತ್ರಕರ್ತರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆದಿರುವ ಅವರು, ಜಿಲ್ಲಾಧಿಕಾರಿ ಸೂಚಿಸಿದ ಷರತ್ತುಗಳನ್ನು ಉಲ್ಲಂಘಿಸಿ ಬಜೆ ಅಣೆಕಟ್ಟಿನಿಂದ ಮಾಣಿಕ್ಯ ಹಾಗೂ ಮಾಣೈ ಯಿಂದ ಶೀರೂರಿನ ವರೆಗೆ ಹೂಳೆತ್ತುವ ನೆಪದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು, ಇದರಿಂದಾಗಿ ನೂರಾರು ಕೋಟಿ ರೂ.ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಲಾಕ್‌ಡೌನ್ ದುರ್ಲಾಭವನ್ನು ಪಡೆದು ಸಮಿತಿಯ ಸದಸ್ಯರು ಪ್ರಭಾವಿಗಳೊಂದಿಗೆ ಕೈ ಜೋಡಿಸಿ ಅಕ್ರಮ ಮರಳುಗಾರಿಕೆ ಯನ್ನು ರಾಜಾರೋಷವಾಗಿ ನಡೆಸಿಕೊಳ್ಳುತ್ತಾ ಬಂದಿದ್ದು, ಈ ಬಗ್ಗೆ ರಮೇಶ್ ಕಾಂಚನ್ ಎಂಬವರು ಎಸಿಬಿ ಹಾಗೂ ಲೋಕಾಯುಕ್ತ ಸಂಸ್ಥೆಗಳಿಗೆ ದೂರನ್ನು ಸಲ್ಲಿಸಿದ್ದಾರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹೇಳಿದ್ದಾರೆ. ಆದ್ದರಿಂದ, ತಾವು ದಯವಿಟ್ಟು ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಕ್ರಮ ಮರಳುಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕೆಂದು ಸಲೀಮ್ ಅಹ್ಮದ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!