ಮೇ 31ರ ವರೆಗೂ ಶೇ.50 ಸಿಬ್ಬಂದಿ ಕಾರ್ಯನಿರ್ವಹಣೆ, ಸಮಯ ಬದಲಾವಣೆ ಮುಂದುವರಿಕೆ: ಇಲಾಖೆಗಳಿಗೆ ಕೇಂದ್ರ ಆದೇಶ

ನವದೆಹಲಿ: ಕೊರೋನಾ ವೈರಸ್‌ ಇನ್ನೂ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಮೇ 31ರ ವರೆಗೂ ಅಧೀನ ಕಾರ್ಯದರ್ಶಿ ಮತ್ತು ಕೆಳಹಂತದ ಶೇ, 50ರಷ್ಟು ನೌಕರರು ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ಮಂಗಳವಾರ ತನ್ನ ಇಲಾಖೆಗಳಿಗೂ ಆದೇಶಿಸಿದೆ.

ಈ ಸಿಬ್ಬಂದಿ ಸಚಿವಾಲಯ ಇಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ಹೊಸ ಸುತ್ತೋಲೆ ಹೊರಡಿಸಿದ್ದು, ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದು ತಿಂಗಳು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಮೇ 31ರ ವರೆಗೂ ವಿಸ್ತರಿಸುವಂತೆ ಸೂಚಿಸಿದೆ.

ಪರಿಸ್ಥಿತಿ ಇನ್ನೂ ನಿರೀಕ್ಷಿತ ಮಟ್ಟಕ್ಕೆ ಸುಧಾರಿಸದ ಕಾರಣ, ಒಎಂ(ಅಧಿಕೃತ ಜ್ಞಾಪಕ ಪತ್ರ)ನ ಮಾನ್ಯತೆಯನ್ನು (ಏಪ್ರಿಲ್‌ನಲ್ಲಿ ನೀಡಲಾದ ಅಧಿಕೃತ ಜ್ಞಾಪಕ ಪತ್ರ) ಮೇ 31, 2021 ರವರೆಗೆ ವಿಸ್ತರಿಸಬಹುದು “ಎಂದು ಕೇಂದ್ರ ಹೇಳಿದೆ.

ಕಳೆದ ತಿಂಗಳು ಗ್ರೂಪ್‌ ಬಿ ಮತ್ತು ಸಿ ದರ್ಜೆಯ ನೌಕರರ ಕಾರ್ಯನಿರ್ವಹಣೆಗೆ ವಾರದ ರೋಸ್ಟರ್‌ ರೂಪಿಸುವಂತೆ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು. ಶೇ 50ರಷ್ಟು ನೌಕರರು ಮನೆಯಿಂದ ಕಾರ್ಯನಿರ್ವಹಿಸಿದರೆ, ಉಳಿದವರು ಕಚೇರಿಗೆ ಬರಬೇಕು. ಒಂದು ವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದವರು, ಮುಂದಿನ ವಾರ ಮನೆಯಲ್ಲಿ ಹಾಗೂ ಮನೆಯಿಂದ ಕಾರ್ಯಾಚರಿಸಿದವರು ಕಚೇರಿಗೆ ಬರುವಂತೆ ರೋಸ್ಟರ್‌ ಸಿದ್ಧಪಡಿಸುವಂತೆ ತಿಳಿಸಲಾಗಿತ್ತು.

ಮೊದಲ ವಾರದ ರೋಸ್ಟರ್‌ ಸಿದ್ಧಪಡಿಸುವಾಗ, ಕಚೇರಿಗೆ ಸಮೀಪದಲ್ಲಿರುವವರು ಹಾಗೂ ಕಚೇರಿಗೆ ಬರಲು ಸ್ವಂತ ವಾಹನಗಳನ್ನು ಬಳಸುತ್ತಿರುವವರನ್ನು ಮೊದಲು ಪರಿಗಣಿಸುವಂತೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ನೌಕರರ ಕಾರ್ಯನಿರ್ವಹಣೆ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ.

ಕಚೇರಿಗೆ ಬರುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಕಾರ್ಯನಿರ್ವಹಣೆಗೆ ಪ್ರತ್ಯೇಕ ಸಮಯ ನಿಗದಿಪಡಿಸಬೇಕಿದೆ. ಬೆಳಿಗ್ಗೆ 9ರಿಂದ ಸಂಜೆ 5:30, ಬೆಳಿಗ್ಗೆ 9:30ರಿಂದ 6 ಗಂಟೆ ಹಾಗೂ 10ರಿಂದ 6:30ರ ವರೆಗೂ ಮೂರು ಪಾಳಿಯ ಸಮಯ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!