ಜನತಾ ಕರ್ಫ್ಯೂ ಮುಂದುವರಿಕೆ, ಪತ್ರಕರ್ತರನ್ನು’ಕೋವಿಡ್ ವಾರಿಯರ್ಸ್’ ಆಗಿ ಘೋಷಣೆ: ಬಿಎಸ್ ವೈ
ಬೆಂಗಳೂರು: ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಲಾಗುತ್ತದೆ ಎಂದು ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿ ಮತ್ತು ಆಕ್ಸಿಜನ್ ಸರಬರಾಜು ಕುರಿತಂತೆ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಮೇ 22ರವರೆಗೂ ರಾಜ್ಯದಲ್ಲಿ ಜನತಾ ಕರ್ಫ್ಯೂ ಮುಂದುವರೆಯಲಿದ್ದು, ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಲಾಗುತ್ತದೆ ಎಂದು ಹೇಳಿದರು.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ‘ಜಿಲ್ಲೆಗಳಲ್ಲಿ ಕೊವಿಡ್ ಸಂಬಂಧಿತ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಸರಿಪಡಿಸಬೇಕು. ಮೆಡಿಕಲ್ ಆಕ್ಸಿಜನ್ ಸಬರಾಜು ವ್ಯವಸ್ಥೆಯ ಜವಾಬ್ಧಾರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ರೆಮ್ಡೆಸಿವರ್ ಪೂರೈಕೆ ನಿರ್ವಹಣೆ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ ಸಿ.ಎನ್. ಆಶ್ವತ್ಥನಾರಾಯಣ ಅವರು ವಹಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗಳಲ್ಲಿನ ಬೆಡ್ಗಳ ಹೊಣೆಗಾರಿಕೆಯನ್ನು ಸಚಿವ ಆರ್. ಅಶೋಕ್ ನೋಡಿಕೊಳ್ಳಲಿದ್ದಾರೆ. ಹಾಗೆಯೇ, ಅರಣ್ಯ ಸಚಿವ ಅರವಿಂದ್ ಲಿಂಬಾವಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕೆಲ ಜವಾಬ್ದಾರಿ ಹೊರಿಸಲಾಗಿದೆ ಎಂದು ಹೇಳಿದರು.
ಮಾಧ್ಯಮದವರನ್ನು ಮುಂಚೂಣಿ ಕಾರ್ಯಕರ್ತರಾಗಿ ಘೋಷಣೆ
ಇದೇ ವೇಳೆ ಮಾಧ್ಯಮದವರನ್ನು ಮುಂಚೂಣಿ ಕಾರ್ಯಕರ್ತರಾಗಿ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ ಸಿಎಂ, ರಾಜ್ಯದಲ್ಲಿ ಮಾಧ್ಯಮದವರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಕ್ಸಿಜನ್ ದುರಂತದ ಕುರಿತು ಸಿಎಂ ವಿಷಾದ
ಚಾಮರಾಜನಗರದ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ ಸಿಎಂ ಬಿಎಸ್ ಯಡಿಯೂರಪ್ಪ, ದುರಂತದ ಬಗ್ಗೆ 3 ದಿನದಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹಾಗಾಗಿ ಜಿಂದಾಲ್ ಕಂಪನಿ ಉತ್ಪಾದಿಸುವ ಮೆಡಿಕಲ್ ಆಕ್ಸಿಜನ್ನ್ನು ನಾವೇ ಬಳಸಿಕೊಳ್ಳುತ್ತೇವೆ. ಈ ಕುರಿತು ಕೇಂದ್ರಕ್ಕೆ ಮನವಿ ಮಾಡುತ್ತೇವೆ.
ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಮಾಹಿತಿ ಲಭ್ಯ
ಸಂಸದ ತೇಜಸ್ವಿ ಸೂರ್ಯ ಹಾಸಿಗೆ ಬ್ಲಾಕಿಂಗ್ ಮಾಡುವ ದಂದೆ ಬಯಲಿಗೆಳೆದಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ಈ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಬೆಡ್ ಬ್ಲಾಕಿಂಗ್ನಲ್ಲಿ ಯಾರೇ ಭಾಗಿಯಾಗಿದ್ರೂ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಎಂದು ಸಿಎಂ ಯಡಿಯೂರಪ್ಪ ವಿವರಿಸಿದರು.
ಮೇ 22ರವರೆಗೂ ಜನತಾ ಕರ್ಫ್ಯೂ ವಿಸ್ತರಣೆ
ಮೇ 12ರವರೆಗೂ ಈಗ ಜಾರಿಯಲ್ಲಿರುವ ಕಠಿಣ ನಿಯಮಗಳೇ ಜಾರಿಯಲ್ಲಿರುತ್ತವೆ. ಅದಾದ ಬಳಿಕ ಮುಂದಿನದ್ದು ಚರ್ಚಿಸಿ ನಿರ್ಧರಿಸುತ್ತೇವೆ. ಮಾನವ ಸಂಪನ್ಮೂಲವಾಗಿ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸುತ್ತೇವೆ. ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಸ್ತಾಪಿಸಿದ ಸಿಎಂ ಯಡಿಯೂರಪ್ಪ, ಸರ್ಕಾರಕ್ಕೆ ಸಲಹೆಗಳನ್ನು ಕೊಟ್ಟರೆ ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದರು.
ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿರಬೇಕು
ಹಾಗೆಯೇ, ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಣಗೊಳಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ಹೆಗಲಿಗೇ ಈ ಹೊಣೆ ನೀಡಲಾಗಿದೆ. ನಾಳೆಯಿಂದಲೇ ಜಿಲ್ಲಾ ಉಸ್ತುವರಿ ಸಚಿವರು ಅವರ ಜಿಲ್ಲೆಗಳಿಗೆ ಹೋಗಬೇಕು. ಅಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು. ಈ ಬಗ್ಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Title says may 22…but explanation says…may 12…which is correct