ರಕ್ಷಣಾ ಪಡೆಗಳಿಗೆ ಶಸ್ತ್ರಾಸ್ತ್ರ, ಯುದ್ಧೋಪಕರಣಗಳ ಖರೀದಿಗೆ ಆರ್ಥಿಕ ಅಧಿಕಾರ
ನವದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ರಕ್ಷಣಾ ಪಡೆಗಳಿಗೆ ಶಸ್ತ್ರಾಸ್ತ್ರ, ಯುದ್ಧೋಪಕರಣಗಳ ಖರೀದಿಗಾಗಿ ಆರ್ಥಿಕ ಅಧಿಕಾರ ನೀಡಲಾಗಿದೆ. ಪ್ರಮುಖ ಶಸ್ತ್ರಾಸ್ತ್ರಗಳು ಹಾಗೂ ಯುದ್ಧೋಪಕರಣಗಳ ಖರೀದಿಸುವ ಪ್ರತಿ ಯೋಜನೆಗೆ ಗರಿಷ್ಠ 500 ಕೋಟಿ ರೂಪಾಯಿ ಮೊತ್ತದ ವರೆಗೂ ಅನುಮೋದನೆ ನೀಡಲಾಗಿದೆ.
ಸಂಘರ್ಷದ ಸ್ಥಿತಿಗಳು ಹಾಗೂ ಯುದ್ಧ ಸನ್ನಿವೇಶಗಳನ್ನು ಎದುರಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಆರ್ಥಿಕ ಅಧಿಕಾರವನ್ನು ರಕ್ಷಣಾ ಪಡೆಗಳ ಉಪ ಮುಖ್ಯಸ್ಥರುಗಳಿಗೆ ನೀಡಲಾಗಿದೆ. ಇದರ ಅಡಿಯಲ್ಲಿ ಫಾಸ್ಟ್ ಟ್ರ್ಯಾಕ್ ಪ್ರಕ್ರಿಯೆಗಳ ಮೂಲಕ ಕೊರತೆಗಳನ್ನು ತುರ್ತಾಗಿ ತುಂಬಿಕೊಳ್ಳಬಹುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವುದನ್ನು ಎಎನ್ಐ ವರದಿ ಮಾಡಿದೆ.
ಲಡಾಖ್ ನ ಗಲ್ವಾನ್ ಕಣಿವೆಯನ್ನು ಭಾರತೀಯ ಸೇನೆಯ ಮೇಲೆ ಚೀನಿಯರ ದಾಳಿಯ ನಂತರ ಸೇನೆಗೆ ಹೆಚ್ಚಿನ ಶಸ್ತ್ರಾಸ್ತ್ರ, ಯುದ್ಧೋಪಕರಣಗಳನ್ನು ಖರೀದಿಸಲು ಆರ್ಥಿಕ ಅಧಿಕಾರ ನೀಡಬೇಕಿರುವ ಅಗತ್ಯ ಕಂಡುಬಂದಿದೆ.
ಇದೇ ಮಾದರಿಯಲ್ಲಿ ಉರಿ ದಾಳಿ, ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಂತರದ ದಿನಗಳಲ್ಲಿಯೂ ಸೇನೆಗೆ ಹೆಚ್ಚಿನ ಪ್ರಮಾಣದಲ್ಲಿ ಯುದ್ಧೋಪಕರಣಗಳ ಖರೀದಿಯ ಅಧಿಕಾರವನ್ನು ನೀಡಲಾಗಿತ್ತು. ಭಾರತೀಯ ವಾಯುಪಡೆ ಈ ವಿಶೇಷ ಅಧಿಕಾರದಿಂದ ಹೆಚ್ಚಿನ ಲಾಭ ಪಡೆದಿದ್ದು, ಬಾಲಾಕೋಟ್ ಸ್ಟ್ರೈಕ್ ಬಳಿಕ, ಸ್ಪೈಸ್-2000, ಏರ್ ಟು ಗ್ರೌಂಡ್ ಸ್ಟ್ಯಾಂಡ್ ಆಫ್ ಮಿಸೈಲ್, ಏರ್ ಟು ಏರ್ ಮಿಸೈಲ್ಸ್ ಗಳನ್ನು ಖರೀದಿಸಲಾಗಿತ್ತು.