ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ, ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಬಡ್ತಿ: ಸಚಿವ ಸುರೇಶ್ ಕುಮಾರ್
ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಇದೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಚರ್ಚಿಸಿದ ನಂತರ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗಳು ಆರಂಭವಾಗುವುದಕ್ಕೆ 15-20 ದಿನಗಳ ಮೊದಲೇ ಪ್ರಕಟಿಸಲಾಗುವುದು ಎಂದರು. ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವುದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರೆಸಬೇಕು ಅವರು ಮನವಿ ಮಾಡಿದ್ದಾರೆ.
ಮೊದಲನೇ ಪಿಯು ವಿದ್ಯಾರ್ಥಿಗಳಿಗೆ ಬಡ್ತಿ: ದ್ವಿತೀಯ ಪಿಯು ಪರೀಕ್ಷೆಗಳ ನಂತರ ನಡೆಸಬೇಕೆಂದು ನಿರ್ಧರಿಸಲಾಗಿದ್ದ ಪ್ರಥಮ ಪಿಯು ಪರೀಕ್ಷೆಗಳನ್ನು ಕೋವಿಡ್ ಕಾರಣ ರದ್ದುಪಡಿಸಲಾಗಿದ್ದು, ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲು ಬ್ರಿಡ್ಜ್ ಕೋರ್ಸ್ಗಳನ್ನು ನಡೆಸಲಾಗುವುದು. ಅಲ್ಲದೆ, ಇಲಾಖೆಯ ಯೂ-ಟ್ಯೂಬ್ ಚಾನಲ್ಗಳ ಮೂಲಕ ಈಗಿನಿಂದಲೇ ಈ ಬ್ರಿಡ್ಜ್ ಕೋರ್ಸ್ಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ: ಪರೀಕ್ಷೆಗಳನ್ನು ಮುಂದೂಡಿರುವುದರಿಂದ ವಿದ್ಯಾರ್ಥಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುವಂತೆ ಉಪನ್ಯಾಸಕರು ವರ್ಕ್ ಫ್ರಂ ಹೋಂ ಕೆಲಸ ಮಾಡಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ, ಇಲಾಖೆಯ ಪಠ್ಯ ಬೋಧನಾ ಕ್ರಮಗಳನ್ನು ಅವರೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲ ಆಡಳಿತಾತ್ಮಕ ಚಟುವಟಿಕೆಗೆ ಲಭ್ಯವಾಗಬೇಕಿದೆ. ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರು ತಮ್ಮ ಕೋವಿಡ್ ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.
ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ರಾಜ್ಯದಾದ್ಯಂತ 1047 ಕೇಂದ್ರಗಳಲ್ಲಿನ 5562 ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.
ಈ ಬಾರಿ 5,92,816 ಹೊಸ ವಿದ್ಯಾರ್ಥಿಗಳು, 76,422 ಪುನರಾವರ್ತಿತ ಅಭ್ಯಗಳು ಹಾಗೂ 17,470 ಖಾಸಗಿ ಅಭ್ಯಗಳು ಸೇರಿ 68,6708 ಅಭ್ಯಗಳು ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದರು.
ಪ್ರಾಯೋಗಿಕ ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿದೆ. ರಾಜ್ಯಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಹರಡುತ್ತಿದೆ. ಪರೀಕ್ಷೆಗೆ ಸಹಕಾರ ನೀಡಬೇಕಿದ್ದ ಇಲಾಖೆಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ಹಾಗೆಯೇ ಪರೀಕ್ಷೆ ತೆಗೆದುಕೊಳ್ಳಬೇಕಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ, ವಿದ್ಯಾರ್ಥಿಗಳ ಮತ್ತು ಪೋಷಕರ ಮಾನಸಿಕ ಒತ್ತಡಗಳು ಸೇರಿದಂತೆ ಎಲ್ಲ ಆಯಾಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಿಬಿಎಸ್ಇ ಸೇರಿದಂತೆ ಕೇಂದ್ರ ಮಂಡಳಿ ಪರೀಕ್ಷೆಗಳು ಹಾಗೆಯೇ ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಹಿಮಾಚಲ ಪ್ರದೇಶ, ಛತ್ತೀಸ್ಘಡ್, ರಾಜಸ್ಥಾನ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ 12ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪರೀಕ್ಷೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಪಿಯು ಮಂಡಳಿ ನಿರ್ದೇಶಕಿ ಆರ್. ಸ್ನೇಹಲ್ ಇದ್ದರು.