ಉಡುಪಿ-2, ದ.ಕ-16 ಸಹಿತ ರಾಜ್ಯದ 14,265 ಸಹಕಾರಿ ಬ್ಯಾಂಕ್ ನಷ್ಟದಲ್ಲಿ!

ಬೆಂಗಳೂರು ಮೇ.4(ಉಡುಪಿ ಟೈಮ್ಸ್ ವರದಿ): ಅನೇಕ ಸಂದರ್ಭದಲ್ಲಿ ಹಣದ ಅವಶ್ಯಕತೆ ಉಂಟಾದಗ ತಕ್ಷಣಕ್ಕೆ ನೆರವಾಗುವುದೇ ಸಹಕಾರ ಬ್ಯಾಂಕ್ ಗಳು. ಆದರೆ ಇದೀಗ ರಾಜ್ಯದ 14 ಸಾವಿರಕ್ಕೂ ಅಧಿಕ ಸಹಕಾರ ಬ್ಯಾಂಕ್ ಗಳು ನಷ್ಟದ ಸುಳಿಯಲ್ಲಿ ಸಿಲುಕಿದೆ ಎಂಬ ವಿಚಾರ‌ ತಿಳಿದು ಬಂದಿದೆ. ಅಲ್ಲದೆ ಕರಾವಳಿಯ ಉಭಯ ಜಿಲ್ಲೆಗಳ 18 ಸಹಕಾರ ಬ್ಯಾಂಕ್ ಗಳು ನಿಷ್ಕ್ರಿಯಗೊಂಡಿದ್ದು ಇವುಗಳ ಪೈಕಿ ಉಡುಪಿಯ 2 ಹಾಗೂ ದ.ಕ ಜಿಲ್ಲೆಯ 16 ಸಹಕಾರ ಬ್ಯಾಂಕ್ ಗಳು ನಿಷ್ಕ್ರಿಯ ಗೊಂಡಿದೆ.

ಸಹಕಾರ ಇಲಾಖೆ ನಿಯಮದಂತೆ ಪ್ರತಿವರ್ಷವೂ ಸಹಕಾರ ಸಂಘ ಹಾಗೂ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಅಂದಾಜು ಸಾವಿರಾರು ಸಂಘಗಳು ನವೀಕರಣಗೊಂಡಿಲ್ಲ. ಹೀಗಾಗಿ ನವೀಕರಣದ ಶುಲ್ಕದಿಂದ ಬರಬೇಕಿದ್ದ ನೂರಾರು ಕೋಟಿ ರೂ. ಆದಾಯವೂ ಇಲ್ಲದಂತಾಗಿದೆ. ಆದ್ದರಿಂದ, ನವೀಕರಣಗೊಳ್ಳದ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. 

ಈ ಬಗ್ಗೆ ಸಹಕಾರ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿರುವ 44,571 ಸಹಕಾರ ಸಂಘಗಳ ಪೈಕಿ 14,265 ಸಂಘಗಳು ನಷ್ಟದಲ್ಲಿವೆ. ಇವುಗಳಲ್ಲಿ 4,212 ಸಂಘಗಳು ಲಾಭ ಹಾಗೂ ನಷ್ಟವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆ 2,521 ಸಂಘಗಳು ನಷ್ಟದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ರಾಜ್ಯದ ಜಿಲ್ಲಾವಾರು ನಿಷ್ಕ್ರಿಯಗೊಂಡಿರುವ ಸಹಕಾರಿಗಳನ್ನು ನೋಡುತ್ತಾ ಹೋದರೆ ಮಂಗಳೂರಿನಲ್ಲಿ 16, ಚಾಮರಾಜನಗರ 70, ಉಡುಪಿ 2, ಬೆಳಗಾವಿ 232, ವಿಜಯಪುರ 35, ಧಾರವಾಡ 156, ಕಾರವಾರ 21, ಹಾವೇರಿ 39, ಗದಗ 43, ಬಾಗಲಕೋಟೆ 62, ಕಲಬುರಗಿ 121, ರಾಯಚೂರು 237, ಬೀದರ್ 342, ಬಳ್ಳಾರಿ 85, ಕೊಪ್ಪಳ 117 ಹಾಗೂ ಯಾದಗಿರಿಯಲ್ಲಿ 215 ಸೇರಿ ಒಟ್ಟು 2,521 ಸಂಘಗಳು ನಿಷ್ಕ್ರಿಯಗೊಂಡಿವೆ ಎಂದು ತಿಳಿದು ಬಂದಿದೆ.

ಈ ಪೈಕಿ ಉಡುಪಿ ಜಿಲ್ಲೆಯಲ್ಲಿ ಅತೀ ಕಡಿಮೆ ಹಾಗೂ ಬೀದರ್ ನಲ್ಲಿ ಅತೀ ಹೆಚ್ಚು ಸಹಕಾರ ಬ್ಯಾಂಕ್’ಗಳು ನಿಷ್ಕ್ರಿಯ ಗೊಂಡಿರುವುದು ಗೋಚರಿಸುತ್ತದೆ. ಲಾಭಾಂಶ ಹಂಚಿಕೊಳ್ಳುವುದು,  ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು,  ವ್ಯಾಪಕ ಭ್ರಷ್ಟಾಚಾರ, ಖಾತೆದಾರರು ಹಣವನ್ನು ಲಪಟಾಯಿಸುವುದು,  ಅಧಿಕ ಲಾಭದ ಆಸೆಗೆ ಬೇರೆ ಕಡೆಗಳಲ್ಲಿ ಠೇವಣಿ ಇಡುವುದು, ನಕಲಿ ದಾಖಲೆ ಪಡೆದು ಸಾಲ ನೀಡಿಕೆ, ಆಸ್ತಿ ಮೌಲ್ಯಕಿಂತ ಹೆಚ್ಚಿನ ಸಾಲ ನೀಡಿಕೆ, ಸಾಲ ವಸೂಲಾತಿ ಮಾಡಲು ವಿಫಲ ವಾಗಿರುವುದು ಇವೇ ಮೊದಲಾದ ಕಾರಣಗಳಿಂದಲೇ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

 ರಾಜ್ಯದಲ್ಲಿರುವ ಸಹಕಾರ ಬ್ಯಾಂಕ್ ಗಳ ಬಗ್ಗೆಸಹಕಾರ ಇಲಾಖೆ ನೀಡಿರುವ ಅಂಕಿ-ಅಂಶಗಳು ಹೀಗಿದ್ದು,18 ಬಹುರಾಜ್ಯ ಮಟ್ಟದ ಸಹಕಾರ ಸಂಘ, 320 ರಾಜ್ಯಮಟ್ಟದ ಮಹಾಮಂಡಳ, 664 ಜಿಲ್ಲಾ ಮಟ್ಟ ಮೀರಿ ರಾಜ್ಯಮಟ್ಟದ ಒಳಗಿರುವ ಸಂಘ, 649 ಜಿಲ್ಲಾ ಮಟ್ಟದ ಸಹಕಾರ ಸಂಘ, 1,404 ತಾಲೂಕು ಮಟ್ಟ ಮೀರಿ ಜಿಲ್ಲಾ ಮಟ್ಟ ಒಳಗಿರುವ ಸಂಘ, 3,004 ತಾಲೂಕು ಮಟ್ಟದ ಸಂಘ ಹಾಗೂ 38,512 ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ ಸಂಘಗಳು ಸೇರಿ ಒಟ್ಟು 44,571 ಸಂಘಗಳಿವೆ. ಇದರಲ್ಲಿ 2,742 ‘ಎ‘ ವರ್ಗೀಕರಣ, 12,446 ‘ಬಿ‘ ವರ್ಗೀಕರಣ, 21,395 ‘ಸಿ‘ ವರ್ಗೀಕರಣ ಹಾಗೂ 3,703 ‘ಡಿ‘ ವರ್ಗೀಕರಣಗಳಾಗಿ ವಿಂಗಡಿಸಲಾಗಿದೆ. ಜತೆಗೆ, 4,285 ‘ಎನ್’ ಲೆಕ್ಕ ಪರಿಶೋಧನೆಯಾಗದೆ ಇರುವ ಸಂಘಗಳಿವೆ.ಇನ್ನು‌15 ಬಹುರಾಜ್ಯಮಟ್ಟದ ಸಹಕಾರ ಸಂಘ, 44 ಸಹಕಾರ ಮಹಾಮಂಡಳ, 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 180 ಗ್ರಾಮೀಣ ಬ್ಯಾಂಕ್, 5,844 ಕೃಷಿ ಪತ್ತಿನ ಸಹಕಾರ ಬ್ಯಾಂಕ್, 25 ಲ್ಯಾಂಪ್ಸ್ ಸಹಕಾರ ಬ್ಯಾಂಕ್, 43 ರೇಷ್ಮೆ ಬೆಳೆಗಾರ ಬ್ಯಾಂಕ್, 105 ಸಹಕಾರ ಗ್ರೇನ್ ಬ್ಯಾಂಕ್, 284 ಪಟ್ಟಣ ಸಹಕಾರ ಬ್ಯಾಂಕ್, 3,554 ಪತ್ತಿನ ಸಹಕಾರ ಬ್ಯಾಂಕ್, 1,258 ನೌಕರರ ಪತ್ತಿನ ಬ್ಯಾಂಕ್, 243 ಟಿಎಪಿಸಿಎಂಎಸ್, 106 ಮರಾಟ ಸಹಕಾರ ಬ್ಯಾಂಕ್, 37 ಸಹಕಾರಿ ಸಕ್ಕರೆ ಕಾರ್ಖಾನೆ, 156 ಸಂಸ್ಕರಣ ಸಹಕಾರ ಸಂಘ, 16 ಸಹಕಾರಿ ನೂಲಿನ ಗಿರಣಿ ಸೇರಿ 50 ವಿವಿಧ ಬಗೆಯ ಸಂಘಗಳಿವೆ ಎಂದು  ತಿಳಿದು ಬಂದಿದೆ.

ರಾಜ್ಯದಲ್ಲಿ , ಈಗಾಗಲೇ ವ್ಯವಹಾರಿಕ ಕಾರಣಗಳಿಂದ‌ ಸಹಕಾರಿ ಬ್ಯಾಂಕ್ ಗಳು ನಷ್ಟ ಅನುಭವಿಸುತ್ತಿದೆ. ಈ ನಡುವೆ ಕೊರೋನಾ ಅಲೆಯಿಂದ ಕೂಡಾ ಸಹಕಾರ ಬ್ಯಾಂಕ್ ಗಳ ವ್ಯವಹಾರಕ್ಕೆ ಹೊಡೆತ ಬಿದ್ದಿದೆ ಎನ್ನಬಹುದು. ಯಾಕೆಂದರೆ ಕಳೆದ ವರ್ಷದ ಕೊರೋನಾ ಅಲೆಗೆ ಎಲ್ಲಾ ಕ್ಷೇತ್ರಗಳಲ್ಲಿನ ವ್ಯವಾಹರಗಳೂ ಬುಡಮೇಲಾಗಿದ್ದವು. ಇದೀಗ ಮತ್ತೆ ಕೋವಿಡ್ 2 ನೇ ಅಲೆ ಆರ್ಥಿಕ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಹೀಗಿರುವಾಗ  ಕೊರೋನಾ ಪ್ರಭಾವದಿಂದಾಗಾಗಿ ಸಹಕಾರಿ ಕ್ಷೇತ್ರ ಕೂಡಾ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೆ  2021-22 ನೇ ವರ್ಷದ ಸಹಕಾರ ಬ್ಯಾಂಕ್ ಗಳ ಚಟುವಟಿಕೆ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!