ಉಡುಪಿ: ಜಿಲ್ಲೆಯಲ್ಲಿಯೂ ಆಕ್ಸಿಜನ್‌, ಬೆಡ್’ಗಳ ಕೊರತೆ?

ಉಡುಪಿ ಮೇ.3(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ಬೆಡ್ ಗಳು, ಆಕ್ಸಿಜನ್, ವೆ‌ಂಟಿಲೇಟರ್ಗಳ ಕೊರತೆಯೂ ಇಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ. ಆದರೆ ಮತ್ತೊಂದೆಡೆ ಸೋಂಕಿತರ ಕುಟುಂಬಸ್ಥರು ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನು ನೋಡಿದರೆ ಜಿಲ್ಲೆಯಲ್ಲಿಯೂ ಬೆಡ್ ಗಳ ಕೊರತೆ ಉಂಟಾಗಿದೆಯೇ ಎಂಬ ಭಯ ಕಾಡಲಾರಂಭಿಸಿದೆ.

ಇದಕ್ಕೆ ಕಾರಣ ಯಾಸಿನ್ ಕೋಡಿಬೆಂಗ್ರೆ ಅವರು ಸೋಂಕಿತರೊಬ್ಬರನ್ನು ಆಸ್ಪತ್ರೆಗೆ ದಾಖಲಿಸುವಾಗ ಜಿಲ್ಲೆಯಲ್ಲಿ ಎದುರಾದ ಬೆಡ್ ಗಳ ಕೊರತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು,‌ ಇವರು ಗಂಗೊಳ್ಳಿಯ ಸೋಂಕಿತರೊಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಜಿಲ್ಲೆಯ ಅನೇಕ ಆಸ್ಪತ್ರೆಗಳ ಜೊತೆಗೆ ಬೆಡ್ ನ ಲಭ್ಯತೆ ಬಗ್ಗೆ ವಿಚಾರಿಸಿದ್ದಾರೆ.

ಅದರೆ ಯಾವ ಆಸ್ಪತ್ರೆಯಲ್ಲಿ ಕೇಳಿದರೂ ಬೆಡ್ ಇಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಇನ್ನು ಒಂದು ಖಾಸಗಿ ಆಸ್ಪತ್ರೆಯಲ್ಲಿ ಕೇಳಿದಾಗ ಶುಲ್ಕದ ಬಗ್ಗೆ ಗೊತ್ತಿದೆಯಲ್ಲಾ ಎಂದು ಹೇಳುತ್ತಾರೆ. ಜೊತೆಗೆ ವೆಂಟಿಲೇಟರ್ ನ ಐಸಿಯುನ್ನು ನೀಡಲು ಕಾಲ್ ಸೆಂಟರ್ ಮೂಲಕನೇ ಪಡೆಯಬೇಕು ಎಂದು ತಿಳಿಸಿದ್ದಾರೆ. ಆದರೆ ಕಾಲ್ ಸೆಂಟರ್ ಕರೆಗಳಿಗೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ತಿಳಿಸಿದರು.

ಇದೇ ವೇಳೆ, ಈ ಸೋಂಕಿತರು ಪ್ರಾಣ ಕಳೆದುಕೊಂಡರೆ ಅದಕ್ಕೆ ಜಿಲ್ಲಾಡಳಿತ , ಜಿಲ್ಲಾ ಆರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರಕಾರವೇ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದರು. ಇನ್ನು ಆಸ್ಪತ್ರೆಯಲ್ಲಿ ಬೆಡ್ ಗಳ ಅಲಭ್ಯತೆಯ ಕುರಿತು ಸಂಶಯ ವ್ಯಕ್ತಪಡಿಸಿ ಈ ಬಗ್ಗೆ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಬಳಿ‌ ಮನವಿ ಮಾಡಿಕೊಂಡಿದ್ದಾರೆ.

ಈ ನಡುವೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 10 ಐಸಿಯು ಬೆಡ್‌ಗಳಿದ್ದು, ಒಟ್ಟು 10 ವೆಂಟಿಲೇಟರ್‌ಗಳಿವೆ. ಸದ್ಯ ನಮ್ಮಲ್ಲಿ 10 ಐಸಿಯು ಬೆಡ್‌ಗಳು ಕೂಡ ಭರ್ತಿಯಾಗಿದ್ದು, ಯಾವುದೇ ಬೆಡ್‌ಗಳು ಖಾಲಿ ಇಲ್ಲ’ ಎಂದು ಉಡುಪಿ ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದ್ದು, ಸದ್ಯ ನಮ್ಮಲ್ಲಿ ಮುಂದಿನ 36 ಗಂಟೆಗಳಿಗೆ ಬೇಕಾಗುವಷ್ಟು ಆಕ್ಸಿಜನ್ ಲಭ್ಯ ಇದ್ದು, ಹೆಚ್ಚಿನ ಆಕ್ಸಿಜನ್ ಪೂರೈಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿರುವ ಬೆಡ್‌ಗಳಿಗೆ ಬೇಕಾದ ಆಕ್ಸಿಜನ್‌ಗೆ ಯಾವುದೇ ಕೊರತೆ ಇಲ್ಲ. ನಾಳೆ ಸಂಜೆ ಅಥವಾ ಮೇ 5 ಬೆಳಗ್ಗೆವರೆಗೆ ಬೇಕಾಗುವಷ್ಟು ಆಕ್ಸಿಜನ್ ನಮ್ಮಲ್ಲಿ ಲಭ್ಯವಿದೆ. ನಮ್ಮ ಜಿಲ್ಲೆಗೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಯಾಗದಿದ್ದರೆ ಸಮಸ್ಯೆಯಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ವರೆಗೆ ಮಂಗಳೂರಿನಿಂದ ಪೂರೈಕೆಯಾಗುವ ಆಕ್ಸಿಜನ್ ನಂಬಿಕೊಂಡಿದ್ದೇವು. ಈಗ ಅಲ್ಲಿನ ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಸಮಸ್ಯೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಹೆಚ್ಚುವರಿ ಬೆಡ್‌ನ ವ್ಯವಸ್ಥೆಯನ್ನು ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಬೆಳಪುವಿನಲ್ಲಿ ಆಕ್ಸಿಜನ್ ಘಟಕ ಇರುವುದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೂ ಮಾತನಾಡಿದ್ದೇವೆ. ಪೂರೈಕೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!