ಕೋವಿಡ್’ನಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ಹೋಗಲು ದಾರಿ ತೋರಿಸುವ ಬಿಜೆಪಿಯ ಫ್ಲೆಕ್ಸ್ – ಭಾರೀ ಟ್ರೋಲ್!

ಯಲಹಂಕ, ಮೇ.3 (ಉಡುಪಿ ಟೈಮ್ಸ್ ವರದಿ): ಇತ್ತ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಜೊತೆಗೆ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲು ಮುಟ್ಟಿದೆ.

ಇದೆಲ್ಲದರ ನಡುವೆ ಕೋವಿಡ್ ಸೋಂಕಿನಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ಹೋಗಲು ದಾರಿ ತೋರಿಸುವ ಬಿಜೆಪಿ ಸರಕಾರದ ಫ್ಲೆಕ್ಸ್ ಒಂದು ಬಾರೀ ಟ್ರೋಲ್ ಆಗಿದೆ. ಈ ಫ್ಲೆಕ್ಸ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ಹೋಗಲು ದಾರಿ ತೋರಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಅಂತ್ಯ ಸಂಸ್ಕಾರಕ್ಕೆ ಹೋಗುವವರಿಗೆ ಉಚಿತ ಕಾಫಿ, ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಿರುವುದಾಗಿ ಬರೆದುಕೊಂಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಯಲಹಂಕದ ಗಿಡ್ಡೇನ ಹಳ್ಳಿ ಪ್ರದೇಶದಲ್ಲಿ ಹಾಕಿರುವ ಈ ಬ್ಯಾನರ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ಹೋಗಲು ದಾರಿ ತೋರಿಸಿರುವ ಜೊತೆಗೆ  ಕೋವಿಡ್ ನಿಂದ ಮೃತಪಟ್ಟವರನ್ನು ಸಕಲ ಸರಕಾರಿ ಮರ್ಯಾದೆಯೊಂದಿಗೆ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಈ ಕಾರ್ಯಕ್ಕೆ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ ಊಟದ ವ್ಯವಸ್ಥೆಯನ್ನು ಯಲಹಂಕ ಕ್ಷೇತ್ರದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ರವರ ಮಾರ್ಗದರ್ಶನದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್ ಮಲ್ಲಯ್ಯ ರವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಿರುತ್ತಾರೆ ಎಂದು ಪ್ರಧಾನ ಮಂತ್ರಿ, ಮುಖ್ಯಮಂತ್ರಿಯವರ ಜೊತೆಗೆ ಶಾಸಕರು ಹಾಗೂ ಅಧ್ಯಕ್ಷರುಗಳ ಭಾವಚಿತ್ರ ಬಳಸಿ ಅಳವಡಿಸಲಾಗಿದೆ.

ಈ ಬ್ಯಾನರ್ ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬ್ಯಾನರ್ ತೆರವುಗೊಳಿಸಲಾಗಿದೆ. ಆದರೆ ಈ ಫ್ಲೆಕ್ಸ್ ಟ್ರೋಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ ಗಳು ವ್ಯಕ್ತವಾಗಿದೆ. ಆಕ್ಸಿಜನ್ ಕೊಡ್ತೇವೆ, ಲಸಿಕೆ ನಿಡ್ತೇವೆ ಅಂತ ಭರವಸೆ ನೀಡಬೇಕಾದವರು. ಮನೆಯವರು ಸತ್ತ ನೋವಿನಲ್ಲಿ ಇರುವವರಿಗೆ ಚಾ ಕೊಡ್ತೇವೆ, ಬಿಸ್ಕಿಟ್ ಕೊಡ್ತೆವೇ ಅಂತ ಪ್ರಚಾರ ಗಿಟ್ಟಿಸಿಕೊಂಡು ಸಾವಿನಲ್ಲೂ ಕೀಳು ಪ್ರಚಾರ ತಗೊಳ್ಳೋದು ಅಸಹ್ಯ ಅನಿಸಲ್ವಾ… ಎಂದು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ಲೆಕ್ಸ್ ಹೇಳುತ್ತಿದೆ ಭವ್ಯ ಭಾರತದ ದುರಂತ ಕತೆ, ಅಂತ್ಯ ಸಂಸ್ಕಾರಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರಧಾನಿ, ಮುಖ್ಯ ಮಂತ್ರಿಯವರ ಶುಭ ಹಾರೈಕೆಯೊಂದಿಗೆ ಎಂಬ ವ್ಯಂಗ್ಯ ಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಈ ನಡುವೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ. ಮರಿಸ್ವಾಮಿ ಅವರು, ಇಂದು ಸಂಜೆಯಿಂದ, ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ನಗರ ಜಿಲ್ಲೆಯ ಸ್ಥಳವೊಂದರಲ್ಲಿ ಕೆಲವರು ಫ್ಲೆಕ್ಸ್ ಅಳವಡಿಸಿ ರಾಷ್ಟ್ರ ನಾಯಕರ, ರಾಜ್ಯದ ನಾಯಕರ ಮತ್ತು ನನ್ನ ಭಾವಚಿತ್ರ ಬಳಸಿ ಪ್ರಚಾರಕ್ಕೆ ದುರ್ಬಳಕೆ ಮಾಡಿರುವುದು ಖಂಡನಾರ್ಹ ವಿಚಾರ. ವಿಚಾರ ತಿಳಿದ ಕೂಡಲೆ ಫ್ಲೆಕ್ಸ್ ತೆರವುಗೊಳಿಸಲು ಸೂಚಿಸಿರುತ್ತೇನೆ. ಸ್ವಯಂ ನಾನೇ ಕೋವಿಡ್ ಎರಡನೆ ಅಲೆಯ ಸಂತ್ರಸ್ಥನಾಗಿ, ಅದರ ತೀಕ್ಷ್ಣತೆಯನ್ನು ಅರಿತಿದ್ದೇನೆ. ವಿಧಿಯ ಕ್ರೂರತೆಗೆ ನನ್ನ ಬಂಧುಗಳು, ಮಿತ್ರರನ್ನು ಕಳೆದುಕೊಂಡಿದ್ದೇನೆ. ಆ ನೋವಿನ ಅರಿವು ನನಗಿದೆ. ಹಾಗಾಗಿ ಅಚಾತುರ್ಯದಿಂದ ನಡೆದಿರುವ ಘಟನೆಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!