ಸರ್ಕಾರದ ಮುಂದಿನ ಆದೇಶವರೆಗೆ ಕ್ಷೌರದಂಗಡಿ ತೆರೆಯದಿರಲು ಭಂಡಾರಿ ಮಹಾ ಮಂಡಲ ನಿರ್ಧಾರ

ಉಡುಪಿ, ಮೇ 3(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಕ್ಷೌರಿಕ ವೃತ್ತಿ ಬಾಂಧವರ ಸಂಕಷ್ಟಕ್ಕೆ ಉಡುಪಿ ಜಿಲ್ಲಾಡಳಿತ ಕೂಡಲೇ   ಸ್ಪಂದಿಸಿ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸಲೂನ್/ ಕ್ಷೌರದಂಗಡಿ ತೆರೆಯಲು ಅನುಮತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಭಂಡಾರಿ ಮಹಾ ಮಂಡಲದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ  ಕ್ಷೌರಿಕರ ಬವಣೆ ಮತ್ತು ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿ, ಕ್ಷೌರಿಕರ ಜೀವನ ನಿರ್ವಹಣೆಗೆ ಸಲೂನ್ ತೆರೆಯಲು ನಿಯಮ ಬದ್ಧ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಯವರನ್ನು ವಿನಂತಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿಯವರು ಪ್ರತಿಕ್ರಿಯೆ ನೀಡಿ, ಕೊರೋನಾ ಮಹಾಮಾರಿಯ ತೀವ್ರತೆಯ ಬಗ್ಗೆ ವಿವರಿಸಿ, ನೂರು ಜನರಿಗೆ ಟೆಸ್ಟ್ ಮಾಡಿದರೆ 50 ಜನರಿಗೆ ಪಾಸಿಟಿವ್ ಬರುತ್ತದೆ. ಸಮುದಾಯದ ಅತೀ ಹತ್ತಿರದಿಂದ ಕ್ಷೌರ ಸೇವೆ ಮಾಡುವ ವೃತ್ತಿ ಬಾಂಧವರಿಗೆ ಇದು ತುಂಬಾ ಬೇಗ ಹರಡ ಬಹುದಾಗಿದೆ. ಆದ್ದರಿಂದ ದಯವಿಟ್ಟು ಇನ್ನೂ ಹತ್ತು ದಿನ ನಮ್ಮೊಂದಿಗೆ ಸಹಕರಿಸಿ.

ನಿಮ್ಮ ಸಮಸ್ಯೆ, ಸಂಕಷ್ಟದ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದು ಸರ್ಕಾರದಿಂದ ಏನಾದರೂ ಸಹಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಯವರ ಭರವಸೆ ಗೆ ಒಪ್ಪಿದ ಮಹಾ ಮಂಡಲ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶದಂತೆ ಮುಂದಿನ ಆದೇಶ ಅಥವಾ ಅನುಮತಿಯವರೆಗೆ ಯಾರೂ ತಮ್ಮ ಸಲೂನ್/ ಕ್ಷೌರದಂಗಡಿ ತೆರೆಯದೆ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದೆ.

ಈ ಸಂಧರ್ಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಎಂ.ಭಂಡಾರಿ, ದೇವಸ್ಥಾನದ ಪ್ರತಿನಿಧಿ ಮತ್ತು ಉತ್ಸವ ಸಮಿತಿ ಅಧ್ಯಕ್ಷ ಅಶೋಕ್ ಭಂಡಾರಿ ಕುತ್ಪಾಡಿ, ಸ್ಪಂದನ ಭಂಡಾರಿ ಬಳಗದ ಅಧ್ಯಕ್ಷ ಅರುಣ್ ಭಂಡಾರಿ ಬೈಕಾಡಿ, ಭಂಡಾರಿ ಮಹಾ ಮಂಡಲದ ಉಪಾಧ್ಯಕ್ಷ ಅರುಣ್ ಭಂಡಾರಿ ಪರ್ಕಳ, ಉಡುಪಿ ಭಂಡಾರಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಭಂಡಾರಿ ಕಟಪಾಡಿ, ಸವಿತಾ ಸಮಾಜ ಉಡುಪಿ ಜಿಲ್ಲಾ ಮಾಜಿ ಜಿಲ್ಲಾಧ್ಯಕ್ಷ ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ, ದೇವಸ್ಥಾನದ ಪ್ರತಿನಿಧಿ ಕರುಣಾಕರ ಭಂಡಾರಿ ಬೈಕಾಡಿ, ಬ್ರಹ್ಮಾವರ ತಾಲೂಕು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ,ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷ ಶಂಕರ ಭಂಡಾರಿ ಮಣಿಪಾಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!