ರೆಮ್‌ಡಿಸಿವರ್ ಅಕ್ರಮ ಮಾರಾಟ- ಜಿಲ್ಲಾ ಆಸ್ಪತ್ರೆ 3 ಸಿಬಂದಿ ಸಹಿತ 10 ಮಂದಿಯ ಸೆರೆ

ಬಾಗಲಕೋಟೆ: ರೆಮ್‌ಡಿಸಿವರ್ ಅಕ್ರಮವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಇಲ್ಲಿನ ಪೊಲೀಸರು ಸೋಮವಾರ ಬೇಧಿಸಿದ್ದಾರೆ.

ರೆಮ್‌ಡಿಸಿವರ್ ಕೊಳ್ಳುವವರ ರೀತಿ ಮಾರುವೇಷದಲ್ಲಿ ತೆರಳಿದ್ದ ಸೈಬರ್, ಆರ್ಥಿಕ ಅಪರಾಧ ಮತ್ತು ಮಾದಕವಸ್ತು ಕಳ್ಳಸಾಗಾಣಿಕೆ ತಡೆ ವಿಭಾಗದ ಪೊಲೀಸರ ತಂಡ (ಸಿಇಎನ್) 10 ಮಂದಿಯನ್ನು ಬಂಧಿಸಿದೆ. ಇವರಲ್ಲಿ ನವನಗರದ ಜಿಲ್ಲಾ ಆಸ್ಪತ್ರೆಯ ಮೂವರು ಹಾಗೂ ಬೇರೆ ಬೇರೆ ಖಾಸಗಿ ಆಸ್ಪತ್ರೆಗಳ ಏಳು ಮಂದಿ ಸೇರಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾದ ವಿಠ್ಠಲ ಚಲವಾದಿ, ರಂಗಪ್ಪ ದಿಣ್ಣೆ, ರಾಜು ಗುಡಿಮನಿ, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ತಿಮ್ಮಣ್ಣ ಗಡವನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ ಲಮಾಣಿ, ಗಣೇಶ ನಾಟಿಕರ, ಪ್ರವೀಣ ಕೊಟ್ಲಿ, ಮಹಾಂತಗೌಡ ಬಿರಾದಾರ ಬಂಧಿತರು. ಆರೋಪಿಗಳಿಂದ 14 ಸೀಶೆ ರೆಮ್‌‌ಡಿಸಿವರ್ ಚುಚ್ಚುಮದ್ದು, ಎರಡು ಖಾಲಿ ಸೀಶೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಪೂರೈಕೆಯಾಗುತ್ತಿದ್ದ ರೆಮ್‌ಡಿಸಿವರ್ ಚುಚ್ಚುಮದ್ದನ್ನು ಅಲ್ಲಿನ ಸಂಗ್ರಹದಿಂದ ಕದ್ದೊಯ್ಯುತ್ತಿದ್ದ ಆರೋಪಿಗಳು, ಅವುಗಳನ್ನು ಖಾಸಗಿಯವರಿಗೆ ₹ 25 ರಿಂದ 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಖಾಲಿಯಾದ ಸೀಶೆಗಳನ್ನು ತಂದು ಮತ್ತೆ ಅದೇ ಸ್ಥಳದಲ್ಲಿ ಇಡುತ್ತಿದ್ದರು ಎಂದು ತಿಳಿದುಬಂದಿದೆ.

ಜಪ್ತಿ ಮಾಡಲಾದ ಚುಚ್ಚುಮದ್ದುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಜಿಲ್ಲಾ ಆರೋಗ್ಯಾಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ ಎಸ್ಪಿ, ಸಾರ್ವಜನಿಕರು ಕಾಳಸಂತೆಯ ಮೂಲಕ ಚುಚ್ಚುಮದ್ದು ಕೊಳ್ಳಲು ಹೋಗಬೇಡಿ. ಇದರಿಂದ ಅಗತ್ಯವಿರುವ ವ್ಯಕ್ತಿಗಳಿಗೆ ಚುಚ್ಚುಮದ್ದು ಸಿಗದಂತಾಗುತ್ತದೆ ಎಂದು ಮನವಿ ಮಾಡಿದರು. 

ಚಚ್ಚುಮದ್ದು ಕಳ್ಳ ಸಾಗಾಣಿಕೆ ವಿಚಾರದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರ ನಿಷ್ಕಾಳಜಿತನ ಇದೆಯೇ,  ಕಳ್ಳತನದಲ್ಲಿ ತಂದ ಚುಚ್ಚುಮದ್ದು ಎಂದು ಗೊತ್ತಿದ್ದರೂ ಅದನ್ನು ರೋಗಿಗಳಿಗೆ ಚುಚ್ಚಿದ ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧವೂ ತನಿಖೆ ನಡೆಸಲಾಗುವುದು. 

ವಂಚನೆ,ನಂಬಿಕೆ ದ್ರೋಹ ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಇಎನ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!