ಏರ್ ಇಂಡಿಯಾ ವಿಮಾನದ 30 ಪ್ರಯಾಣಿಕರಿಗೆ ಕೊರೋನಾ- ಇಟಲಿಯಲ್ಲಿ ಎಲ್ಲ 242 ಪ್ರಯಾಣಿಕರ ಕ್ವಾರಂಟೈನ್!
ರೋಮ್: ಭಾರತದ ಅಮೃತ್ ಸರ್ ದಿಂದ ರೋಮ್ ಗೆ ಬಂದಿಳಿದಿದ್ದ ಪ್ರಯಾಣಿಕ ವಿಮಾನದ 30 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆಯೇ ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಸಿಬ್ಬಂದಿ ಸಹಿತ 242 ಮಂದಿಯನ್ನು ಇಟಲಿ ಸರ್ಕಾರ ಕ್ವಾರಂಟೈನ್ ಮಾಡಿದೆ.
ಕಳೆದ ಬುಧವಾರ ಏರ್ ಇಂಡಿಯಾದ ಅಮೃತ್ ಸರ-ರೋಮ್ ವಿಮಾನದಲ್ಲಿದ್ದ ಕನಿಷ್ಠ 30 ಜನರು ಕೋವಿಡ್-19 ಗೆ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿತ್ತು. ಹೀಗಾಗಿ ಕೋವಿಡ್ ನಿರ್ಬಂಧನೆಗಳ ಪ್ರಕಾರ ಸಿಬ್ಬಂದಿಗಳ ಸಹಿತ ವಿಮಾನದಲ್ಲಿದ್ದ ಎಲ್ಲ 242 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವಿಮಾನಯಾನ ಉದ್ಯಮದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಪ್ರಸ್ತುತ ಸೋಂಕಿಗೆ ತುತ್ತಾದ 30 ಮಂದಿಯ ಪೈಕಿ ವಿಮಾನದ ಇಬ್ಬರು ಸಿಬ್ಬಂದಿಗಳೂ ಕೂಡ ಇದ್ದಾರೆ ಎಂದು ಹೇಳಲಾಗಿದೆ.
ಕಳೆದ ಗುರುವಾರ, ಅಮೃತಸರ-ರೋಮ್ ವಿಮಾನ ಇಳಿಯುವ ಕೆಲವೇ ಗಂಟೆಗಳ ಮೊದಲು, ಇಟಲಿಯ ಸರ್ಕಾರವು ಭಾರತದಿಂದ ಆಗಮಿಸುವ ಎಲ್ಲ ಪ್ರಯಾಣಿಕರನ್ನು 10 ದಿನಗಳ ಕಾಲ ಕ್ವಾರಂಟೈನ್ ಮಾಡುವ ಕುರಿತು ಆದೇಶ ಹೊರಡಿಸಿತ್ತು. ಅಲ್ಲದೆ ನಿಲ್ದಾಣದಲ್ಲಿಯೇ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿತ್ತು. ಅದರಂತೆ ಏರ್ ಇಂಡಿಯಾ ವಿಮಾನದ ಮೂಲಕ ರೋಮ್ ಗೆ ಬಂದಿಳಿದಿದ್ದ ಪ್ರಯಾಣಿಕರನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ಇಬ್ಬರು ಸಿಬ್ಬಂದಿಗಳು ಸೇರಿದಂತೆ 30 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಬಾಕಿ 242 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಭಾರತದಲ್ಲಿ ಕೋವಿಡ್ 2ನೇ ಅಲೆ ಜೋರಾಗಿದ್ದು, ಸೋಂಕಿತರ ಸಂಖ್ಯೆ ನಿತ್ಯ 3.50ಲಕ್ಷ ದಾಟುತ್ತಿದೆ. ಇಂದು ಕೂಡ ಭಾರತದಲ್ಲಿ 3,68,147 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.