ಮತ ಮರು ಎಣಿಕೆಗೆ ಕೋರ್ಟ್’ಗೆ ಅರ್ಜಿ: ಕಾಳಿಘಾಟ್ ದೇಗುಲಕ್ಕೆ ಭೇಟಿ, ಪ್ರಾರ್ಥನೆ ಸಲ್ಲಿಸಿದ ಮಮತಾ ಬ್ಯಾನರ್ಜಿ
ಕೋಲ್ಕತಾ: ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ.. ಆದರೆ ನಂದಿಗ್ರಾಮ ಚುನಾವಣಾ ಫಲಿತಾಂಶದ ಕುರಿತು ಮರು ಮತಎಣಿಕೆಗೆ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಟಿಎಂಸಿ, ನಂದಿಂಗ್ರಾಮ ಚುನಾವಣಾ ಫಲಿತಾಂಶ ಗೊಂದಲದಿಂದ ಕೂಡಿದ್ದು, ಕಾಣದ ಕೈಗಳ ಮೇಲಾಟ ಎದ್ದು ಕಾಣುತ್ತಿದೆ. ಇನ್ನೂ ಮತಎಣಿಕೆ ಕಾರ್ಯವೇ ಮುಕ್ತಾಯವಾಗಿಲ್ಲ. ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ ಇದೆ. ಮತ ಎಣಿಕೆ ಪೂರ್ಣವಾದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ. ಅದಾಗ್ಯೂ ಫಲಿತಾಂಶ ಘೋಷಣೆಯಾಗಿದೆ. ಹೀಗಾಗಿ ಮರುಮತಎಣಿಕೆ ಮಾಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಟಿಎಂಸಿ ಹೇಳಿದೆ.
ಇದೇ ವಿಚಾರವಾಗಿ ಸ್ವತಃ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೂಡ ಮಾತನಾಡಿದ್ದು, ‘ನಾನು ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಫಲಿತಾಂಶ ಘೋಷಣೆಯ ನಂತರ ಕೆಲವು ಕಾಣದ ಕೈಗಳ ಕೈವಾಡ ನಡೆದಿವೆ. ನಾನು ಅದೇನು ಎಂದು ಶೀಘ್ರ ಬಹಿರಂಗಪಡಿಸುತ್ತೇನೆ. ಈ ಸಂಬಂಧ ಮರು ಮತಎಣಿಕೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ.
ಕೋಲ್ಕತಾದ ಕಾಳಿಘಾಟ್ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಆಯೋಗದ ಗೊಂದಲದ ಫಲಿತಾಂಶ ಪ್ರಕಟಣೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.