ಮಸ್ಕಿ: ಪ್ರತಾಪ್ ಗೌಡ ಪಾಟೀಲ್’ಗೆ ಮುಖಭಂಗ- ಗೆಲುವಿನತ್ತ ಕಾಂಗ್ರೆಸ್’ನ ಬಸನಗೌಡ
ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಗೆ ಭಾರೀ ಮುಖಭಂಗವಾಗುವ ಲಕ್ಷಣ ಕಾಣುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ಗೆಲುವು ಬಹುತೇಕ ನಿಶ್ಚಯವಾಗಿದೆ. ಇಷ್ಟು ಹೊತ್ತು ಮತ ಎಣಿಕೆ ಕೇಂದ್ರದಲ್ಲಿದ್ದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಇದೀಗ ತಮ್ಮ ಸೋಲು ಖಚಿತ ಎಂದು ಗೊತ್ತಾಗುತ್ತಿದ್ದಂತೆ ಹೊರ ನಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ತಾವು ಮಾಡಿದ್ದರೂ ಜನರು ಬೆಲೆ ಕೊಟ್ಟಿಲ್ಲ, ನಿರೀಕ್ಷಿತ ಮತಗಟ್ಟೆಗಳಲ್ಲಿಯೂ ತಮ್ಮ ಪರ ಮತಗಳು ಬಂದಿಲ್ಲ, ಜನ ಹೀಗೆ ಯಾಕೆ ಮಾಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ, ಕ್ಷೇತ್ರದಲ್ಲಿ ವಿರೋಧಿ ಅಲೆ ಎದ್ದಿರುವುದು ಗೊತ್ತಾಗುತ್ತಿದೆ ಎಂದು ಬೇಸರದಿಂದಲೇ ಹೇಳಿದರು.
ಹೊಸಬರೊಂದಿಗೆ ಒಡನಾಟ ಬೇಕು ಎಂದು ಕ್ಷೇತ್ರದ ಜನ ಭಾವಿಸಿದ್ದಾರೆ ಎನಿಸುತ್ತದೆ, ಕ್ಷೇತ್ರದ ಜನಕ್ಕೆ ಅಭಿವೃದ್ಧಿ, ಪ್ರೀತಿ-ವಿಶ್ವಾಸ ಬೇಕಾಗಿಲ್ಲ ಎಂದು ನನಗೆ ಇಂದು ಉಂಟಾದ ಸೋಲಿನಿಂದ ಕಂಡುಬರುತ್ತಿದೆ. ಹೊಸಬರಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ ಎನಿಸುತ್ತಿದೆ, ಯಾರು ಬಂದು ಪ್ರಚಾರ ಮಾಡಿದರೂ ಪರಿಣಾಮ ಬೀರುವುದಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಸೋಲಿಗೆ ಏನು ಕಾರಣ ಎಂದು ಪಕ್ಷದ ಹಿರಿಯ ನಾಯಕರು ತೀರ್ಮಾನಿಸುತ್ತಾರೆ, ಸೋತೆನೆಂದು ಕ್ಷೇತ್ರ, ಪಕ್ಷ ಬಿಟ್ಟು ಹೋಗುವುದಿಲ್ಲ, ಮುಂದೆಯೂ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇನೆ, ಇನ್ನೂ ಎರಡು ವರ್ಷಗಳ ಕಾಲ ನಮ್ಮ ಪಕ್ಷ ಅಧಿಕಾರದಲ್ಲಿ ಇರುತ್ತದೆ, ಈ ಸಮಯದಲ್ಲಿ ನನ್ನಿಂದ ಏನು ಈ ಕ್ಷೇತ್ರಕ್ಕೆ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದರು.
ಇತ್ತೀಚಿನ ವರದಿ ಬಂದಾಗ ಕಾಂಗ್ರೆಸ್ ನ ಬಸನಗೌಡ ತುರುವಿಹಾಳ 8 ಸಾವಿರದ 618 ಮತಗಳ ಅಂತರಿಂದ 8ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಂದ ಮುನ್ನಡೆಯಲ್ಲಿದ್ದಾರೆ.