ಉಡುಪಿ: ‘ಶಾಂತಾ ಎಲೆಕ್ಟ್ರಿಕಲ್ಸ್ & ಎಂಜಿನಿಯರ್ಸ್’ಗೆ ಅತ್ಯುನ್ನತ ಸೇವಾ ವಿಭಾಗದ ಪ್ರಶಸ್ತಿ
(ಉಡುಪಿ ಮೇ.1 (ಉಡುಪಿ ಟೈಮ್ಸ್ ವರದಿ): ಉತ್ಕೃಷ್ಟ ಸೇವೆಯೊಂದಿಗೆ ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾಗಿರುವ ಶಾಂತಾ ಎಲೆಕ್ಟ್ರಿಕಲ್ಸ್ & ಎಂಜಿನಿಯರ್ಸ್ ಪ್ರೈ.ಲಿ. ಸಂಸ್ಥೆಯು ”ಟೈಮ್ಸ್ ಆಫ್ ಇಂಡಿಯಾ ಬ್ಯುಸಿನೆಸ್ ಅವಾರ್ಡ್- 2021″ ನ “ಅತ್ಯುನ್ನತ ಸೇವಾ ವಿಭಾಗದ” ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ, ನಿರ್ಮಾಪಕ ಸುನಿಲ್ ಶೆಟ್ಟಿಯವರು ಶಾಂತಾ ಎಲೆಕ್ಟ್ರಿಕಲ್ಸ್ & ಎಂಜಿನಿಯರ್ಸ್ ಪ್ರೈ.ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಅವರು, ಕಳೆದ 24 ವರ್ಷಗಳಿಂದ ಶಾಂತಾ ಎಲೆಕ್ಟ್ರಿಕಲ್ಸ್ & ಎಂಜಿನಿಯರ್ಸ್ ಪ್ರೈಲಿ, ಸಂಸ್ಥೆಯು ಕ್ಲಪ್ತ ಸಮಯದಲ್ಲಿ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ಬಂದಿದ್ದು, 25ನೇ ವರ್ಷದ ಬೆಳ್ಳಿ ಹಬ್ಬದ ಈ ಸಂದರ್ಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಂಪೆನಿಯ ಜನರಲ್ ಮ್ಯಾನೇಜರ್ ವಿಷ್ಣುಮೂರ್ತಿ ಮತ್ತು ಮ್ಯಾನೇಜರ್ ಗೋಪಾಲ್ರವರು ಉಪಸ್ಥಿತರಿದ್ದರು.
ಈ ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಎಲೆಕ್ಟ್ರಿಕಲ್ ಸೂಪರ್ ಗ್ರೇಡ್ ಪರವಾನಿಗೆಯೊಂದಿಗೆ ಇಸ್ರೋ, ವಿಮಾನ ನಿಲ್ದಾಣ, ಹೆಚ್.ಎ.ಎಲ್., ಭಾರತೀಯ ರೈಲು, ಬಿ.ಹೆಚ್.ಎ.ಎಲ್., ಕೆ.ಪಿ.ಟಿ.ಸಿ.ಎಲ್., ಮೆಸ್ಕಾಂ, ಕೆ.ಎಮ್.ಎಫ್., ಕೆ.ಪಿ.ಸಿ.ಎಲ್., ಆರ್.ಬಿ.ಐ. ಮುಂತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ನೊಂದಾವಣಿಯೊಂದಿಗೆ, ವಿದ್ಯುಚ್ಛಕ್ತಿ ಕಾಮಗಾರಿಗಳನ್ನು ಉತ್ಕೃಷ್ಟ ಮತ್ತು ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಾ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಸಂಸ್ಥೆಯಾಗಿದೆ.