ಚೀನಾಗೆ ಸಡ್ಡುಹೊಡೆದ ಭಾರತ: ಗಡಿಗೆ 3 ಸಾವಿರ ಐಟಿಬಿಪಿ ಸಿಬ್ಬಂದಿ ರವಾನೆ, ರಸ್ತೆ ಕಾಮಗಾರಿ ಮುಂದುವರಿಕೆ
ನವದೆಹಲಿ: ತಂಟೆಕೋರ ಚೀನಾಗೆ ಸಡ್ಡು ಹೊಡೆದ ಭಾರತ ಸಂಘರ್ಷ ಪೀಡಿತ ಗಾಲ್ವಾನ್ ಕಣಿವೆ ಸೇರಿದಂತೆ ಗಡಿಯುದ್ದಕ್ಕೂ 3 ಸಾವಿರ ಐಟಿಬಿಪಿ ಸೈನಿಕರನ್ನು ರವಾನೆ ಮಾಡಿದೆ. ಅಲ್ಲದೆ ಸಂಘರ್ಷದ ಬೆನ್ನಲ್ಲೇ ಸ್ಥಗಿತವಾಗಿದ್ದ ರಸ್ತೆ ಕಾಮಗಾರಿಗಳ ವೇಗವಾಗಿ ಪೂರ್ಣಗೊಳಿಸಲು ಕ್ರಮಕೈಗೊಂಡಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದ್ದು, ಗಾಲ್ವಾನ್ ಕಣಿವೆ ಸೇರಿದಂತೆ ದೇಶದ ಗಡಿಯುದ್ದಕ್ಕೂ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗಾಗಿ ದೊಡ್ಡ ಮಟ್ಟದ ಸೇನಾ ತುಕಡಿಗಳನ್ನು ರವಾನೆ ಮಾಡಲಾಗಿದೆ. ಎಲ್ ಎಸಿ ಗೆ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಸೈನಿಕರನ್ನು ರವಾನೆ ಮಾಡಲಾಗಿದೆ.
ಸೇನಾ ಮೂಲಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಿಂದ ಸೇನೆಯ 15 ಕಂಪನಿಗಳನ್ನು ಲಡಾಖ್ ಗೆ ರವಾನೆ ಮಾಡಲಾಗಿದ್ದು, ಹೆಚ್ಚುವರಿ 30 ಕಂಪನಿಗಳನ್ನು ಎಲ್ ಎಸಿ ಉದ್ದಕ್ಕೂ ನಿಯೋಜಿಸಲಾಗಿದೆ. ಪ್ರತೀಯೊಂದು ಕಂಪನಿಯಲ್ಲೂ ಸುಮಾರು 100ರಿಂದ 120ಸೈನಿಕರಿರಲಿದ್ದಾರೆ. ಎಲ್ ಎಸಿ ಒಟ್ಟು 7 ಸಾವಿರ ಸೈನಿಕರನ್ನು ನಿಯೋಜಿಸುವ ಕುರಿತು ಸೇನೆ ಚಿಂತನೆಯಲ್ಲಿದೆ ಎನ್ನಲಾಗಿದೆ.
ಕಳೆದ ವರ್ಷ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದ್ದ ಈ 255 ಕಿ.ಮೀ ರಸ್ತೆಯಿಂದಾಗಿ ಭಾರತಕ್ಕೆ ಚೀನಾದ ಗಡಿ ಭಾಗಗಳಿಗೆ ಸೇನೆಯನ್ನು ಸಾಗಿಸುವುದು, ಸಂಯೋಜನೆಗೆ, ಸ್ಥಳೀಯ ಗ್ರಾಮಗಳಿಗೆ ಲೇಹ್ ಜತೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗುತ್ತದೆ. ಚೀನಾದ ಸೇನೆ ಈ ರಸ್ತೆ ಯೋಜನೆಗೆ ಹಿಂದಿನಿಂದಲೂ ತಡೆ ಒಡ್ಡಲು ಯತ್ನಿಸುತ್ತಿತ್ತು. ಇದರ ಪರಿಣಾಮವೇ ಮತ್ತೊಮ್ಮೆ ಚೀನಾ ಇಡೀ ಗಾಲ್ವಾನ್ ಕಣಿವೆ ತನ್ನದು ಎಂಬ ರಣ ಕಹಳೆಯನ್ನು ಊದಿರುವುದು ಎನ್ನುತ್ತಾರೆ ವಿದೇಶಾಂಗ ವಿಶ್ಲೇಷಕರು.
ಚೀನಾದ ದುಸ್ಸಾಹಸ ಇಷ್ಟಕ್ಕೇ ಮುಕ್ತಾಯವಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ತನ್ನ ನಿಯಂತ್ರಣದಲ್ಲಿರುವ ವಿವಾದಿತ ಸ್ಥಳದಲ್ಲಿ ಗಾಲ್ವಾನ್ ನದಿಯನ್ನೇ ತನಗೆ ಬೇಕಾದಂತೆ ತಿರುಗಿಸಲೂ ಚೀನಾ ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಸದ್ಯಕ್ಕೆ ನದಿಯನ್ನು ತಿರುಗಿಸಲು ಅದಕ್ಕೆ ಸಾಧ್ಯವಾಗಿಲ್ಲ. ಉಪಗ್ರಹಗಳು ಸೆರೆಹಿಡಿದಿರುವ ಚಿತ್ರಗಳನ್ನು ವಿಶ್ಲೇಷಿಸಿರುವ ನಿವೃತ್ತ ಕರ್ನಲ್ ವಿನಾಯಕ್ ಭಟ್, ಅವರು ಚೀನಾ ವಿವಾದಿತ ಭಾಗದಲ್ಲಿ ರಸ್ತೆ, ಸೇತುವೆ, ನದಿಯ ಹರಿವು ತಿರುಗಿಸಲು ಮಾಡಿರುವ ಪ್ರಯತ್ನಗಳನ್ನು ಉಲ್ಲೇಖಿಸಿದ್ದಾರೆ.