ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂ. ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಭರ್ಜರಿ ಗೆಲುವು
ಶಿವಮೊಗ್ಗ: ಭದ್ರಾವತಿ ನಗರಸಭೆ, ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ .
ಭದ್ರಾವತಿ ನಗರಸಭೆಯ 34 ಸ್ಥಾನಗಳಲ್ಲಿ ಕಾಂಗ್ರೆಸ್ 18, ಜೆಡಿಎಸ್ 11, ಬಿಜೆಪಿ 4, ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.
ಶಾಸಕ ಸಂಗಮೇಶ್ವರ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಪ್ರಕರಣ ದಾಖಲಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲೆಯಲ್ಲಿ ದೊಡ್ಡ ಆಂದೋಲನವನ್ನೇ ನಡೆಸಿತ್ತು. ಹಾಗಾಗಿ, ನಗರಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಕೊನೆಗೂ ಮತದಾರರು ಕಾಂಗ್ರೆಸ್ ಬೆಂಬಲಿಸಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ 15 ಸ್ಥಾನಗಳಲ್ಲಿ ಕಾಂಗ್ರೆಸ್ 9, ಬಿಜೆಪಿ 6 ಸ್ಥಾನ ಗಳಿಸಿವೆ. ಆ ಮೂಲಕ ಎರಡೂವರೆ ದಶಕಗಳ ಬಿಜೆಪಿ ಅಧಿಪತ್ಯ ಅಂತ್ಯಗೊಂಡಿದೆ. ಜೆಡಿಎಸ್ ತೊರೆದು ಈಚೆಗೆ ಕಾಂಗ್ರೆಸ್ ಸೇರಿದ ಸಹಕಾರಿ ಧುರೀಣ ಆರ್.ಎಂ.ಮಂಜುನಾಥ ಗೌಡ, ಕಿಮ್ಮನೆ ರತ್ನಾಕರ ಅವರ ಒಗ್ಗಟ್ಟು ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.